ದೃಷ್ಟಿ ನಿನ್ನ ಪಾದದಲ್ಲಿ ನೆಡೊ ಹಾಗೆ
(ರಾಗ ಶಂಕರಾಭರಣ. ಆದಿ ತಾಳ)
ದೃಷ್ಟಿ ನಿನ್ನ ಪಾದದಲ್ಲಿ ನೆಡೊ ಹಾಗೆ , ಧರೆ
ದುಷ್ಟಜನಸಂಗಗಳ ಬಿಡೋ ಹಾಗೆ
ಕೆಟ್ಟ ಮಾತು ಕಿವಿಯಿಂದ ಕೇಳದ ಹಾಗೆ ,ಮನ
ಕಟ್ಟಿ ಸದಾ ನಿನ್ನ ಧ್ಯಾನ ಬಿಡದ ಹಾಗೆ ||ಪ||
ದಿಟ್ಟನಾಗಿ ಕೈಯನೆತ್ತಿ ಕೊಡೊ ಹಾಗೆ , ಶ್ರೀ
ಕೃಷ್ಣ ನಿನ್ನ ಪೂಜೆಯನು ಮಾಡೋ ಹಾಗೆ
ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಗೆ ,ಬಲು
ಶಿಷ್ಟ ಜನ ಸೇವೆಯನು ಮಾಡೋ ಹಾಗೆ ||
ಪುಟ್ಟಿಸಿದ ತಾಯಿ ತಂದೇಯಲ್ಲೊ ನೀನು , ಒಂದು
ಹೊಟ್ಟೆಗಾಗಿ ದೈನ್ಯಪಡಬೇಕೆ ನಾನು
ಪಟ್ಟೆ ಪಟ್ಟಾವಳಿ ಬೇಡಲಿಲ್ಲ ನಾನು , ಎನ್ನ
ಗುಟ್ಟು ಅಭಿಮಾನಗಳ ಕಾಯೊ ನೀನು ||
ನಟ್ಟ ನೀರೊಳಗೆ ಈಸಲಾರೆ ನಾನು, ಎತ್ತಿ
ಕಟ್ಟೆ ಸೇರಿಸ ಬೇಕಯ್ಯಾ ನೀನು
ಬೆಟ್ಟದಂಥ ಪಾಪ ಹೊತ್ತಿರುವೆ ನಾನು, ಅದ
ಸುಟ್ಟು ಬಿಡು ಪುರಂದರವಿಠಲ ನೀನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments