ಕಂಡೆ ಕಂಡೆ ಸ್ವಾಮಿಯ

ಕಂಡೆ ಕಂಡೆ ಸ್ವಾಮಿಯ

(ರಾಗ ಮುಖಾರಿ ಮಟ್ಟೆತಾಳ) ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ ||ಪ|| ಕಂಡೆ ತಿರುಪತಿವೆಂಕಟೇಶನ ಕಾರುಣಾತ್ಮಕ ಸಾರ್ವಭೌಮನ ಕಾಮಿತಾರ್ಥಗಳೀವ ದೇವನ ಕರುಣನಿಧಿ ಎಂದೆನಿಸಿ ಮೆರೆವನ ||ಅ.ಪ|| ಕೋಟಿಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಲಿ ಕಂಡೆನು ನೋಟಕಾಶ್ಚರ್ಯವಾದ ನಗೆಮುಖನೊಸಲಿನಲಿ ತಿರುಮಣಿಯ ಕಂಡೆನು ಸಾಟಿಯಿಲ್ಲದೆ ಚದುರ ಹಸ್ತದಿ ಶಂಖಚಕ್ರಗದಾಬ್ಜ ಕಂಡೆನು ಬೂಟಕದ ಮಾತಲ್ಲ ಕೇಳಿರೋ ಭೂರಿದೈವರ ಗಂಡನಂಘ್ರಿಯ|| ತಪ್ಪುಕಾಣಿಕೆ ಕಪ್ಪವನು ಸಮಸ್ತದ್ವೀಪಗಳಿಂದಲಿ ತರಿಸುವ ಉಪ್ಪು ಓಗರಗಳನೆ ಮಾರಿಸಿ ಉಚಿತದಿಂದಲಿ ಹಣವ ಗಳಿಸುವ ಇಪ್ಪತ್ತು ದುಡ್ಡಿಗೆ ಸೇರು ತೀರ್ಥ ಒಪ್ಪದಲಿ ಕ್ರಯ ಮಾಡಿ ಕೊಡಿಸುವ ಸರ್ಪಶಯನ ಸಾರ್ವಭೌಮನ ಅಪ್ಪ ವೆಂಕಟರಮನನಂಘ್ರಿಯ || ಉರದಿ ಶ್ರೀ ದೇವಿಯಳ ಕಂಡೆನು ಉನ್ನತದ ಕೌಸ್ತುಭವ ಕಂಡೆನು ಗರುಡ ಕಿನ್ನರನಾರದಾದಿ ಗಂಧರ್ವರ ಎಡಬಲದಲಿ ಕಂಡೆನು ತರತರದ ಭಕ್ತರಿಗೆ ವರಗಳ ಕರೆದು ಕೊಡುವುದ ನಿರತ ಕಂಡೆನು ಶರಧಿಶಯನನ ಶೇಷಗಿರಿಯ ವರದ ಪುರಂದರವಿಠಲನಂಘ್ರಿಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು