ಎಂತು ನೋಡಿದರು ಚಿಂತೆ

ಎಂತು ನೋಡಿದರು ಚಿಂತೆ

(ರಾಗ ಕಾಂಭೋಜ ಝಂಪೆ ತಾಳ) ಎಂತು ನೋಡಿದರು ಚಿಂತೆ ,ಈ ಒಡಲು ನಿ- ಶ್ಚಿಂತರಾಗಿಹ ಒಬ್ಬರನು ಕಾಣೆ || ಬ್ರಹ್ಮನಿಗೆ ಶಿರ ಹೋಗಿ ಬಾಡಿ ಬಳಲುವ ಚಿಂತೆ ಮುನ್ನ ಮಾರುತಿಗೆ ಕಪಿಯಾದ ಚಿಂತೆ ಮನ್ಮಥಗೆ ತನು ಸುಟ್ಟು ಬೂದಿಯಾಗಿಹ ಚಿಂತೆ ಕಣ್ಣು ಮೂರುಳ್ಳವಗೆ ತಿರಿದುಂಬ ಚಿಂತೆ || ಕಾಮಧೇನುವಿಗೆ ಕರೆದೊಯ್ವರೆಂಬ ಚಿಂತೆ ಕಾಮಿನಿಯರಿಗೆ ಒಡವೆ ವಸ್ತ್ರ ಚಿಂತೆ ಸೀಮೆಯಾಳುವ ದೊರೆಗೆ ಪರದೊರೆಯ ಚಿಂತೆ ಪಾಮರ ನರಗೆ ಬರೆಹ ಬಾರದಿರುವ ಚಿಂತೆ || ಧರ್ಮಾತ್ಮರೆಲ್ಲರಿಗೆ ದೀನಜನರಾಚಿಂತೆ ಕರ್ಮಾತ್ಮರೆಲ್ಲರಿಗೆ ಕೆಡುವ ಚಿಂತೆ ವರ್ಮ ಬೆಳೆಸುವರಿಗೆ ವೈರಿ ಕೊಲ್ಲುವ ಚಿಂತೆ ಬರ್ಮಣಗೆ ಸತತ ಮೃಷ್ಟಾನ್ನ ಚಿಂತೆ || ಭಕ್ತರಿಗೆ ಗುರುವಿನೊಳು ಮುಕ್ತಿ ಬೇಡುವ ಚಿಂತೆ ಮುಕ್ತರಿಗೆ ಪರಮಾತ್ಮ ದೊರೆವ ಚಿಂತೆ ಯುಕ್ತಿ ಬಲ್ಲವಗೆ ವಿವೇಕವಾಡುವ ಚಿಂತೆ ವಿರಕ್ತನಾದವಗೆ ಕಾಮ ಸುಡುವ ಚಿಂತೆ || ಕ್ಷುದ್ರ ರಕ್ಕಸರಿಗೆಲ್ಲರನು ತಿನ್ನುವ ಚಿಂತೆ ನಿದ್ರೆ ಬಾರದವನಿಗೆ ರಾತ್ರಿ ಚಿಂತೆ ಕದ್ದು ತರಲ್ಹೋದವಗೆ ಕೋಳಿ ಕೂಗುವ ಚಿಂತೆ ಮುದ್ದು ಪುರಂದರವಿಠಲನೊಬ್ಬನಿಗೆ ನಿಶ್ಚಿಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು