ಈಗಲೆ ಭಜಿಸೆಲೆ ಜಿಹ್ವೆ
(ರಾಗ ಸೌರಾಷ್ಟ್ರ ಆದಿತಾಳ)
ಈಗಲೆ ಭಜಿಸೆಲೆ ಜಿಹ್ವೆ , ನೀ
ಜಾಗುಮಾಡದೆ ಹರಿಯ ಪಾದಾಬುಜವ ||
ದೇಹಗೇಹ ಸಂಬಂಧಿಗಳು ನಿನ್ನ
ಮೋಹಬದ್ಧನಾಗಿ ಭವದಿ ಕಟ್ಟುವರು
ಆಹಾರ ಗುಹ್ಯೇಂದ್ರಿಯವೆಂಬೊ ಎರೆಡರ
ವಿಹಾರದಲಿ ನೀನು ಮುಣುಗಿರದೆ ಮನ ||
ಮರಣವು ತೊಡದು ಮಡಗಿ, ನಿನ್ನ
ತರುಣಿ ಪುತ್ರಮಿತ್ರರೆಲ್ಲರಳುತಿರಲು
ಕೊರಳೊಳು ಗುರುಗುಟ್ಟುವಾಗ ನರ-
ಹರಿಯ ಸ್ಮರಣೆ ನಿನಗನುಗೊಡದಲೆ ಮನ ||
ತಪ್ತಲೋಹದ ಮೆಲೊರಗಿಸಿ, ನಿನ್ನ
ಕತ್ತರಿಸಿದ ಖಂಡ ಬೇಯ್ಸುವರು
ನೆತ್ತಿಯ ಕೊರೆದು ನಾಲಿಗೆಯ ಹರಿವಾಗ
ಚಿತ್ತಜನಯ್ಯನ ನೆನೆಗೊಡದಲೆ ಮನ ||
ಅಸಿಪತ್ರವನದರೊಳಗ್ಹೊಗಿಸಿ, ನಿನ್ನ
ಬಿಸಿ ಬಿಸಿ ಖಂಡವ ಹೊರ ಹೊರಡಿಸಿ
ಹಸಿಯ ನೆತ್ತರು ಬಸಿದು ಹೋಗುವಾಗ
ಕುಸುಮನಾಭನ ನಾಮ ನೆನೆಯಗೊಡದಲೆ ||
ಕುಂಭಿಪಾಕದೊಳಗೆ ಕುದಿಸಿ, ನಿನ್ನ
ಅಂಬುಮೊನೆಗಳಿಂದ ಸರ್ವಾಂಗ ಇರಿಸಿ
ಅಂಬರಕ್ಹೋಗೆ ಕಾಗೆಯೆ ಕಚ್ಚಿ
ಅಂಬುಜಾಕ್ಷನ ನಾಮ ನೆನೆಯಗೊಡದಲೆ ||
ದುರುಳ ಯಮನ ದೂತರಾರ್ಭಟಿಸಿ, ನಿನ್ನ
ಉರಿವ ಗಾಜಿನ ಕಂಭಕೆ ತೆಕ್ಕೆಗೈಸಿ
ಪರಿಭವದೊಳು ಬಳಲುವಾಗ ಹರಿ-
ಪುರುಷೋತ್ತಮನ ನಾಮ ನೆನೆಯಗೊಡದಲೆ ||
ದುರಿತಕೋಟಿ ಪರಿಹರಿಸಿ , ನಿನ್ನ
ನರಕದ ಬಾಧೆಗಳೆಲ್ಲ ತಪ್ಪಿಸುವ
ಸಿರಿಪುರಂದರವಿಠಲನ್ನ ನೆರೆ
ಹರುಷದಿ ನೀ ನೆನೆದು ಸುಖಿಯಾಗೋ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments