ಇನ್ನಾದರೂ ಹರಿಯ ನೆನೆ ಕಂಡ್ಯ

ಇನ್ನಾದರೂ ಹರಿಯ ನೆನೆ ಕಂಡ್ಯ

(ರಾಗ ಮುಖಾರಿ ಝಂಪೆ ತಾಳ) ಇನ್ನಾದರೂ ಹರಿಯ ನೆನೆ ಕಂಡ್ಯ ಮನುಜ ಮುನ್ನಾದ ದುಃಖವು ನಿಜವಾಗಿ ತೊಲಗುವುದು || ಊರೂರ ನದಿಗಳಲಿ ಬಾರಿಬಾರಿಗೆ ಮುಳುಗಿ ತೀರದಲಿ ಕುಳಿತು ನೀ ಹಣೆಗೆ ನಿತ್ಯ ನೀರಿನಲಿ ಮಟ್ಟಿಯನು ಕಲೆಸಿ ಬರೆಯುತ ಮೂಗ ಬೇರನ್ನು ಪಿಡಿದು ಮುಳುಗಿಕ್ಕಲೇನುಂಟು || ನೂರಾರು ಕರ್ಮಂಗಳನ್ನು ಡಂಬಕೆ ಮಾಡಿ ಆರಾರಿಗೋ ಹಲವು ದಾನ ಕೊಟ್ಟು ದಾರಿದ್ರ್ಯವನು ಪಡೆದು ತಿರಿದುಂಬುವುದಕೀಗ ದಾರಿಯಾಯ್ತೇ ಹೊರತು ಬೇರೆ ಫಲವುಂಟೇ || ನಾಡಾಡಿ ದೈವಗಳ ಚಿನ್ನ ಬೆಳ್ಳಿಗಳಿಂದ ಮಾಡಿಕೊಂಡದರ ಪೂಜೆಯನು ಮಾಡಿ ಕಾಡಕಳ್ಳರು ಬಂದು ಅವನು ಕೊಂಡೊಯ್ಯೆ ಮಾಡಿಕೊಂಡಿರ್ದುದಕೆ ಬಾಯ ಬಡಕೊಳ್ಳುವೆಯೊ || ಮಗನ ಮದುವೆಯು ಎಂದು ಸಾಲವನು ಮಾಡಿ ನೀ ಸುಗುಣಿಯೆನ್ನಿಸ್ಕೊಳ್ಳಲು ವ್ಯಯಮಾಡಿದೆ ಹಗರಣವಪಡಿಸಿದರೆ ಸಾಲಗಾರು ಬಂದು ಬಗೆಬಗೆಯೊಳವರ ಕಾಲ್ಗೆ ಬಿದ್ದಿರುವೆ || ಕೆಟ್ಟ ಈ ಬದುಕುಗಳ ಮಾಡಿದರೆ ಫಲವೇನು ಥಟ್ಟನೇ ಶ್ರೀ ಹರಿಯ ಪದವ ನಂಬು ದಿಟ್ಟ ಶ್ರೀಪುರಂದರವಿಠಲ ಗತಿಯೆಂದರೆ ಸುಟ್ಟು ಹೋಗುವುದಯ್ಯ ಕಷ್ಟರಾಶಿಗಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು