ಇಂತು ವೇದಾಂತಗಳಲ್ಲಿ
(ರಾಗ ಭೈರವಿ ಆದಿತಾಳ)
ಇಂತು ವೇದಾಂತಗಳಲ್ಲಿ ಸುರರು ನಿನ್ನ ಎಣಿಸುವರಹುದಹುದೈ
ಅಂತ ತಿಳಿಯಲು ಬ್ರಹ್ಮಾದ್ಯರಿಗೆ ಅಳವಲ್ಲಹುದಹುದೈ ||
ರಂಡೆಯ ಮಕ್ಕಳು ಕುಂಡಗೋಳಕರು ರಾಯರು ನಿನ್ನಿಂದೈ
ಪಂಡಿತರಾದ ದ್ವಿಜರಿಗೆ ಭಿಕ್ಷಾಪಾತ್ರವು ನಿನ್ನಿಂದೈ
ಮಂಡೆಯ ನೇವರಿಸಿ ಮೊಲೆಯ ಕೊಟ್ಟವಳಿಗೆ ಮರಣವು ನಿನ್ನಿಂದೈ
ಭಂಡಾಟದಿ ಮೈಗೊಟ್ಟ ಗೋಪಿಯರು ಪಾವನ ನಿನ್ನಿಂದೈ ||
ತೊತ್ತಿನ ಮಗನಿಗೆ ಒಲಿದು ನಿನ್ನಯ ಗುಣ ತೋರಿಸಿದಹುದಹುದೈ
ಉತ್ತಮರನು ನೀನಡವಿ ಸೇರಿಸಿದೆ ಸರ್ವೋತ್ತಮ ನೀನಹುದೈ
ಅತ್ತೆಯನಾಳಿದೆ ಮಾವನ ಮಡುಹಿದೇತರ ಮರಿಯಾದೆ
ಮತ್ತನಾಗಿ ನಿನ್ನ ಬೈದ ಪಾತಕಿಯ ಮೈಯೊಳಗಿರಿಸಿದೆಯೈ ||
ತಂದೆಯ ಕೊಂದು ಕಂದನ ಸಲಹಿದ ಚಂದವು ನಿನ್ನಿಂದೈ
ಕಂದನ ಕೊಂದು ತಂದೆಯ ಸಲಹಿದೆ ಏತರ ನ್ಯಾಯವಿದೈ
ವಂದಿಸಿ ದಾನವ ಕೊಟ್ಟ ಬಲೀಂದ್ರನ ಬಂಧಿಸಿದಹುದಹುದೈ
ತಂದೆ ಶ್ರೀಪುರಂದರವಿಠಲರಾಯ ನೀ ಮಾಡಿದ ಮರಿಯಾದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments