ಅಮ್ಮ ನಿಮ್ಮ ಮನೆಗಳಲ್ಲಿ

ಅಮ್ಮ ನಿಮ್ಮ ಮನೆಗಳಲ್ಲಿ

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನಮ್ಮ ||ಪಲ್ಲವಿ|| ಬ್ರಹ್ಮ ಮೂರುತಿ ನಮ್ಮ ಕೃಷ್ಣನು ನಿಮ್ಮ ಕೇರಿಯೊಳಿಲ್ಲವೆ ||ಅನುಪಲ್ಲವಿ || ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀ ಗಂಧ ಮೈಯೊಳಗಮ್ಮ ಲೇಸಾಗಿ ತುಲಸಿಯ ಮಾಲೆಯ ಧರಿಸಿದ ವಾಸುದೇವನು ಬಂದ ಕಾಣಿರೇನೆ ||೧|| ಕರದಲ್ಲಿ ಕಂಕಣ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ಹುಲಿಯುಗುರಮ್ಮ ಅರಳೆಲೆ ಕನಕ ಕುಂಡಲ ಕಾಲಲನುಗೆ ಉರಗ ಶಯನ ಬಂದ ಕಂಡಿರೇನೆ ||೨|| ಕುಂಕುಮ ಕಸ್ತೂರಿ ಕರಿ ನಾಮ ತಿದ್ದಿ ಶಂಖ ಚಕ್ರಗಳ ಧರಿಸಿಹನಮ್ಮ ಬಿಂಕದಿಂದಲಿ ಕೊಳಲೂದುತ್ತ ಪಾಡುತ್ತ ಪಂಕಜಾಕ್ಷನು ಬಂದ ಕಾಣಿರೇನೆ ||೩|| ಮಾವನ ಮಡುಹಿದ ಶಕಟನ ಕೆಡಹಿದ ಗೋವರ್ಧನ ಗಿರಿ ಎತ್ತಿದನಮ್ಮ ಆವ ತಾಯಿಗೆ ಈರೇಳು ಜಗ ತೋರಿದ ಕಾವನಯ್ಯ ಬಂದ ಕಾಣಿರೇನೆ ||೪|| ಕಾಲಲಿ ಕಿರು ಗೆಜ್ಜೆ ನೀಲದ ಬಾವುಲಿ ನೀಲ ವರ್ಣನು ನಾಟ್ಯವಾಡುತಲಿ ಮೇಲಾಗಿ ಬಾಯಲ್ಲಿ ಜಗವನ್ನು ತೋರಿದ ಮೂಲೋಕದೊಡೆಯನ ಕಂಡಿರೇನೆ ||೫|| ಹದಿನಾರು ಸಾವಿರ ಗೋಪಿಯರ ಕೂಡಿ ಚತುರಂಗ ಪಗಡೆಯನಾಡುವನಮ್ಮ ಮದನ ಮೋಹನ ರೂಪ ಎದೆಯಲ್ಲಿ ಕೌಸ್ತುಭ ಮಧುಸೂದನ ಬಂದ ಕಾಣಿರೇನೆ ||೬|| ತೆತ್ತೀಸ ಕೋಟಿ ದೇವರ್ಗಳ ಒಡಗೂಡಿ ಹತ್ತಾವತಾರವನೆತ್ತಿದನಮ್ಮ ಸತ್ಯಭಾಮಾ ಪ್ರಿಯ ಪುರಂದರ ವಿಟ್ಠಲ ನಿತ್ಯೋತ್ಸವ ಬಂದ ಕಾಣಿರೇನೆ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು