ಹೊಲೆಯ ಹೊರಗಿಹನೆ

ಹೊಲೆಯ ಹೊರಗಿಹನೆ

(ರಾಗ ಮುಖಾರಿ. ಝಂಪೆ ತಾಳ ) ಹೊಲೆಯ ಹೊರಗಿಹನೆ ಊರೊಳಗಿಲ್ಲವೆ ಶ್ರೀಹರಿಯ ಸ್ಮರಣೆಯನು ಬಲ್ಲವರು ಪೇಳಿ ಶೀಲವನು ಕೈಕೊಂಡು ನಡೆಸದಾತನೆ ಹೊಲೆಯ ಪೇಳಿದ ಹರಿ ಕಥೆಯ ಕೇಳದವ ಹೊಲೆಯ ಆಳಾಗಿ ಅರಸಂಗೆ ಕೇಡು ಬಗೆವವ ಹೊಲೆಯ ಸೂಳೆಯನು ಕಾಮಿಸುವ ಶುದ್ಧ ಹೊಲೆಯ ಕೊಂಡ ಸಾಲಗಳನ್ನು ತಿದ್ದದಾತನೆ ಹೊಲೆಯ ಲಂಡತನದಲಿ ನಡೆವ ಭಂಡ ಹೊಲೆಯ ಉಂಡ ಮನೆಗೆರಡನ್ನು ಬಗೆವಾತನೆ ಹೊಲೆಯ ಹೆಂಡತಿಯ ಇಚ್ಛೆಯವ ಹೇಡಿ ಹೊಲೆಯ ಇದ್ದಾಗ ದಾನ ಧರ್ಮವ ಮಾಡದವ ಹೊಲೆಯ ಮದ್ದಿಕ್ಕಿ ಕೊಲ್ಲುವವ ಮಾರಿ ಹೊಲೆಯ ಬದ್ಧವಾದ ನಯನುಡಿಯು ಇಲ್ಲದಾತನೆ ಹೊಲೆಯ ಶುದ್ಧ ತಾನೆಂಬಾತ ಶುಂಠ ಹೊಲೆಯ ಆಸೆ ಮಾತನು ಕೊಟ್ಟು ಭಾಷೆ ತಪ್ಪುವ ಹೊಲೆಯ ಲೇಸು ಉಪಕಾರಗಳ ಮಾಡದವ ಹೊಲೆಯ ಮೋಸದಲಿ ಜೀವನವ ಮುನಿದು ಕೆಡಿಸುವ ಹೊಲೆಯ ಹುಸಿಯ ಬೊಗಳುವನೊಬ್ಬ ಹುಚ್ಚು ಹೊಲೆಯ ಅರಿತು ಆಚಾರವನು ನಡೆಸದಾತನೆ ಹೊಲೆಯ ಪರಸತಿಗೆ ಅಳುಕಿದವ ಪಾಪಿ ಹೊಲೆಯ ಗುರು ಹರಿಯನು ನಮಿಸದಾತನೇ ಹೊಲೆಯ ಪುರಂದರವಿಟ್ಠಲನ ನೆನೆಯದವ ಹೊಲೆಯ
ದಾಸ ಸಾಹಿತ್ಯ ಪ್ರಕಾರ
ಬರೆದವರು