ಹಿಗ್ಗುವೆ ಏತಕೋ ಈ ದೇಹಕ್ಕೆ

ಹಿಗ್ಗುವೆ ಏತಕೋ ಈ ದೇಹಕ್ಕೆ

(ರಾಗ ಭೈರವಿ. ಅಟ ತಾಳ ) ಹಿಗ್ಗುವೆ ಏತಕೋ, ಈ ದೇಹಕ್ಕೆ ಹಿಗ್ಗುವೆ ಯಾಕೋ ||ಪ|| ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವ ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ ||ಅ.ಪ|| ಸತಿ ಪುರುಷರು ಕೂಡಿ ರತಿ ಕ್ರೀಡೆಗಳ ಮಾಡಿ ಪತನವಾದಿಂದ್ರಿಯ ಪ್ರತಿಮೆಯ ದೇಹಕ್ಕೆ ||೧|| ಆಗಭೋಗಗಳನ್ನು ಆಗುಮಾಡುತಲಿದ್ದು ರೋಗ ಬಂದರೆ ಬಿದ್ದು ಹೋಗುವ ದೇಹಕ್ಕೆ ||೨|| ಪರರ ಸೇವೆಯ ಮಾಡಿ ನರಕ ಭಾಜನನಾಗಿ ಮರಳಿ ಮರಳಿ ಬಿದ್ದು ಉರುಳುವ ದೇಹಕ್ಕೆ ||೩|| ಸೋರುವುದೊಂಭತ್ತು ದ್ವಾರದಿಂದಲಿ ಮಲ ನೀರಿಲ್ಲದಿದ್ಧರೆ ನಾರುವ ದೇಹಕ್ಕೆ ||೪|| ಪುರಂದರ ವಿಠಲನ ಚರಣ ಕಮಲಕ್ಕೆ ಎರಗದೆ ಇರುತಿಹ ಗರುವದ ದೇಹಕ್ಕೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು