ಹರಿಯ ಸ್ಮರಣೆ ಮಾಡಿರೆ
(ರಾಗ ಯಮುನಾಕಲ್ಯಾಣಿ. ಆಟತಾಳ )
ಹರಿಯ ಸ್ಮರಣೆ ಮಾಡಿರೆ
ಗುರು ಮಧ್ವರಮಣನ ಪಾಡಿರೆ ||ಪ||
ಸಿರಿ ರಮಣನ ನೋಡಿರೆ , ಶೃಂ-
ಗಾರದಿಂದಲಿ ಆಡಿರೆ
ನಾರಿಯರೆಲ್ಲರು ಹರಸಿರೆ
ನರಹರಿಯ ಬೇಗ ಕರೆಸಿರೆ
ಸುರ ವೃಕ್ಷ ಕುಸುಮವ ತರಿಸಿರೆ
ಶಿರದಲ್ಲಿ ಬೇಗ ಸುರಿಸಿರೆ
ಗಂಗೋದಕವ ತನ್ನಿರೆ
ಗಂಗಾಳದಲ್ಲಿ ಬೆರೆಸಿರೆ
ರಂಗವಲ್ಲಿಯ ಹಾಕಿರೆ
ರಂಗಗೆ ಬೇಗ ಎರೆಸಿರೆ
ರತ್ನ ಮಂಟಪ ಶೃಂಗರಿಸಿರೆ
ಮುತ್ತಿನ ಗದ್ದಿಗೆ ಹಾಸಿರೆ
ಕಸ್ತೂರಿ ಗಂಧವ ಪೂಸಿರೆ
ಎತ್ತಿ ಕೈ ಚಾಮರ ಬೀಸಿರೆ
ಮುಲ್ಲೆ ಮಲ್ಲಿಗೆ ಜಾಜಿ ಸಂಪಿಗೆ
ಎಲ್ಲ ಕುಸುಮಗಳ ತರಿಸಿರೆ
ಪುಲ್ಲನಾಭನ ಮೇಲೆ ಹಾಕುವ
ನಿಲ್ಲದೆ ಓಡಿ ಬನ್ನಿರೆ
ಪೂತನಿ ಅಸುವ ಹೀರಿದನೆ
ಖ್ಯಾತಿಯ ಜಗಕೆ ತೋರಿದನೆ
ಮಾತೆಯ ಮೊಲೆಯನೊಲ್ಲನೆ
ಅವನತ್ತೆಯ ಕರೆಯಬಲ್ಲನೆ
ಕಾಳಿಯ ಮೇಲೆ ನಿಂತನೆ
ಕಲಕಿ ಚಪ್ಪಾಳಿ ತಟ್ಟುವನೆ
ಸೋಳಸಹಸ್ರ ಗೋಪೆರ ಕೂಡಿ
ಗಳದಿ ತಾಯಿತ ಕಟ್ಟುವನೆ
ಪಟ್ಟವಾಳಿಯುಟ್ಟು ಬನ್ನಿ
ದಟ್ಟೆ ಚುಂಗ ಬಿಟ್ಟು ಬನ್ನಿ
ಪುಟ್ಟ ವಸ್ತ್ರದಿ ಪುರಂದರ-
ವಿಟ್ಠಲರಾಯನ ನೋಡುವ ಬನ್ನಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments