ಹರಿ ನಿನ್ನೊಲುಮೆಯು ಆಗುವ ತನಕ
(ರಾಗ ಶಂಕರಾಭರಣ. ಆದಿ ತಾಳ )
ಹರಿ ನಿನ್ನೊಲುಮೆಯು ಆಗುವ ತನಕ
ಅರಿತು ಸುಮ್ಮನಿರುವುದು ಲೇಸು ||ಪ||
ಮರಳಿ ಮರಳಿ ತಾ ಪಡೆಯದ ಭಾಗ್ಯಕೆ
ಹೊರ ಹೊರಳುತ ಕನಲಲು ಬಂದೀತೆ ||ಅ.ಪ||
ದೂರು ಬರುವ ತೆರ ನಂಬಿಗೆ ಕೊಟ್ಟರೆ ದುರ್ಜನ ಬರುವುದು ತಪ್ಪೀತೆ
ದೂರದಿ ನಿಂತು ಮೊರೆಯಿಟ್ಟು ಕೂಗಲು ಚೋರಗೆ ದಯವು ಪುಟ್ಟೀತೆ
ಬಾರಿ ಬಾರಿಗೆ ಪಾತಿವ್ರತ್ಯವ ಬೋಧಿಸೆ ಜಾರೆಗದರ ನಿಜ ಸೊಗಸೀತೆ
ಊರು ಬಿಟ್ಟು ಬೇರೂರಿಗೆ ಹೋದರೆ ಪ್ರಾರಬ್ಧವು ಬೇರಾದೀತೆ
ಪಟ್ಟೆಮಂಚ ತಿರುವಿಟ್ಟರೆ ಫಣೆಯೊಳು ಮೆಟ್ಟಿದ ಭ್ರಮಣೆಯು ಬಿಟ್ಟೀತೆ
ಹೊಟ್ಟೆಲಿ ಸುತರಿಲ್ಲೆಂದೊದರಲು ಹುಟ್ಟು ಬಂಜೆಗೆ ಫಲವಾದೀತೆ
ಬೆಟ್ಟದ ನಲಿವಿಗೆ ಕಣ್ಣೀರು ಬಂಧರೆ ಬೇಟೆಗಾರಗೆ ದಯ ಪುಟ್ಟೀತೆ ಕೆಟ್ಟ
ಹಾವು ಕಚ್ಚಿದ ಗಾಯಕೆ ಹಳೆ ಬಟ್ಟೆಯೊಳೊರಸೆ ವಿಷ ಹೋದೀತೆ
ಧನಿಕರ ಕಂಡು ದೈನ್ಯವ ಪಟ್ಟರೆ ದಾರಿದ್ರಿಯವು ಹಿಂಗೀತೆ
ದಿನದಿನ ನೊಸಲೊಳು ತಿರುಮಣಿಯಿಟ್ಟರೆ ದೇವರ ದಯವು ಪುಟ್ಟೀತೆ
ಎಣಿಸಿಕೊಂಡೇಳ್ಹಂಜಿಯ ನೂತರೆ ಮಣಿಯದ ಸಾಲವು ತೀರೀತೆ
ಅನುದಿನ ನಮ್ಮ ಪುರಂದರ ವಿಠಲನ ನೆನೆದಲ್ಲದೆ ಭವ ಹಿಂಗೀತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments