ಹರಿ ಕೃಪೆಯಲಿ ತಾನೊಲಿದದ್ದಾದರೆ
(ರಾಗ ಧನಶ್ರೀ. ಆದಿ ತಾಳ )
ಹರಿ ಕೃಪೆಯಲಿ ತಾನೊಲಿದದ್ದಾದರೆ
ಉರುತರ ಮೋಕ್ಷವೆ ಸಾಕ್ಷಿ ||ಪ||
ಹರಿ ಶರಣರ ಸೇವಿಸುವ ನರರಿಗೆ
ಧರೆಯ ಸೌಖ್ಯವೆ ಸಾಕ್ಷಿ ||ಅ. ಪ||
ಮಡದಿ ಮಕ್ಕಳ ಸಾಕದೆ ಬಿಡುವಗೆ
ಕಡು ದಾರಿದ್ರ್ಯವೆ ಸಾಕ್ಷಿ
ಕಡು ಬಡವಗೆ ಧರ್ಮವ ಕೊಡದಿರೆ ಬಾಯಿ
ಬಿಡುವದೆ ಪರರಿಗೆ ಸಾಕ್ಷಿ
ಅನ್ನ ದಾನವ ಮಾಡಿದವಗೆ ದಿವ್ಯ
ಅನ್ನ ಉಂಬುವದೆ ಸಾಕ್ಷಿ
ಹೊನ್ನು ದಾನವ ಮಾಡದವಗೆ ಪರ
ದೈನ್ಯಬಡುವುದೆ ಸಾಕ್ಷಿ
ಕನ್ಯಾದಾನವ ಮಾಡಿದವಗೆ
ದಿವ್ಯ ಹೆಣ್ಣಿನ ಭೋಗವೇ ಸಾಕ್ಷಿ
ಕನ್ಯಾ ದಾನವ ಮಾಡದವಗೆ
ಹೆಣ್ಣಿನ ಹೋರಾಟವೆ ಸಾಕ್ಷಿ
ಕಂಡ ಪುರುಷಗೆ ಕಣ್ಣಿಕ್ಕುವಳಿಗೆ
ಗಂಡನ ಕಳೆವುದೆ ಸಾಕ್ಷಿ
ಬಂಡತನದಿ ಪರ ಸ್ತ್ರೀಯರ ಮೆಚ್ಚುವಗೆ
ಹೆಂಡಿರ ಕಳೆವುದೆ ಸಾಕ್ಷಿ
ಕ್ಷೇತ್ರ ದಾನವ ಮಾಡಿದವಗೆ, ಏಕ-
ಛತ್ರ ರಾಜ್ಯವೆ ಸಾಕ್ಷಿ
ಪಾತ್ರಾಪಾತ್ರವನರಿತು ದಾನ ಮಾಡಿದವಗೆ
ಪುತ್ರರ ಪಡೆವುದೆ ಸಾಕ್ಷಿ
ಪರಿಪರಿ ತಾನುಂಡು ಪರರಿಗೊಂದಿಕ್ಕದ
ನರಗೆ ಗುಲ್ಮರೋಗವೆ ಸಾಕ್ಷಿ
ಪರಿಪರಿಯಿಂದಲಿ ಹಿರಿಯರ ದೂಷಿಸೆ
ತಿರಿದುಂಬೋದೆ ಬಲುಸಾಕ್ಷಿ
ಭಕ್ತಿಯಿಲ್ಲದ ಅಧಮರಿಗೊಂದು
ಕತ್ತಲೆ ಮನೆಯೆ ಸಾಕ್ಷಿ
ಮುಕ್ತಿ ಪಡೆವುದಕೆ ಶ್ರೀ ಪುರಂದರವಿಠಲನ
ಭಕ್ತನಾಗಿ ಇರುವುದೆ ಸಾಕ್ಷಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments