ಹರಿದಿನದಲಿ ಉಂಡ ನರರಿಗೆ
(ರಾಗ ಕಾಂಭೋಜಿ. ಆದಿ ತಾಳ )
ಹರಿ ದಿನದಲಿ ಉಂಡ ನರರಿಗೆ
ಘೋರ ನರಕ ತಪ್ಪದು ಎಂದು ಶ್ರುತಿ ಸಾರುತಲಿದೆ
ಗೋವು ಕೊಂದ ಪಾಪ ವಿಪ್ರರ ಸಾವಿರ
ಜೀವ ಹತ್ಯವ ಮಾಡಿದ ಪಾಪವು
ಭಾವಜನಯ್ಯನ ದಿನದಿ ಉಂಡವರನು
ಕೀವಿನೊಳಗೆ ಹಾಕಿ ಕುದಿಸುವ ಯಮನು
ಒಂದೊಂದು ಅಗುಳಿಗೆ ಕೋಟಿ ಕೋಟಿ ಕ್ರಿಮಿಗಳು
ಅಂದಿನ ಅನ್ನವು ನಾಯಿ ಮಾಂಸವು
ಮಂದರೋದ್ಧಾರನ ದಿನದಿ ಉಂಡವರನ್ನು
ಹಂದಿಯ ಸುಡುವಂತೆ ಸುಡಿಸುವ ಯಮನು
ಅನ್ನ ಪಾನ ತಾಂಬೂಲ ದರ್ಪಣಗಳು
ಚೆನ್ನ ವಸ್ತ್ರಗಳೆಲ್ಲ ವರ್ಜಿತವು
ತನ್ನ ಸತಿಯರ ಸಂಗ ಮಾಡಿದ ನರರಿಗೆ
ಬೆನ್ನಲಿ ಕರುಳ ತೆಗೆವ ಕಂಡ್ಯ ಯಮನು
ಜಾವದ ಜಾಗರ ಕ್ರತು ನಾಲ್ಕು ಸಾವಿರ
ಜಾವ ನಾಲ್ಕರ ಫಲಕೆ ಮಿತಿಯಿಲ್ಲವು
ದೇವ ದೇವನ ದಿನದಿ ನಿದ್ರೆ ಗೈವನ
ಕಾವಲಿಯೊಳು ಹಾಕಿ ಹುರಿಸುವ ಯಮನು
ಇಂತು ಏಕಾದಶಿ ಉಪವಾಸ ಜಾಗರ
ಸಂತತ ಕ್ಷೀರಾಬ್ಧಿಶಯನನ ಪೂಜೆ
ಸಂತುಷ್ಟಿಯಿಂದಲಿ ಮಾಡಿದ ಜನರಿಗ-
ತ್ಯಂತ ಫಲವೀವ ಪುರಂದರವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments