ಸೋಹಮೆನ್ನ ಬೇಡವೋ
(ರಾಗ ಅಠಾಣ ಅಟತಾಳ)
ಸೋಹಮೆನ್ನ ಬೇಡೆಲೋ, ದಾ-
ಸೋಹಮೆಂದು ಪೇಳೆಲೋ ||ಪ||
ಸೋಹಮೆಂಬೋ ಜ್ಞಾನದಿಂದ ಸಾಯಲಿಲ್ಲೇ ಹಿರಣ್ಯಕ, ದಾ-
ಸೋಹಮೆಂಬ ಪ್ರಹ್ಲಾದ
ದೇಹ ನಿತ್ಯ ಮುಕ್ತನಾದ ||ಅ.ಪ||
ನಾನೇ ದೈವವೆಂಬ ಮಾಲಿ ಸುಮಾಲಿ ರಾವಣ ದುಷ್ಟರು
ದಾನವಾರಿ ಹರಿಯ ಜರೆದು ಹೇಗೆ ಪ್ರಾಣ ಬಿಟ್ಟರು
ಜಾನಕೀಪತಿದಾಸನೆಂಬ ವಿಭೀಷನ ಸ್ಥಿತಿ ನೋಡಿಕೊಂಡು
ಭಾನು ವಂಶಜ ದೀನಪೋಷಣ ರಾಮಸ್ಮರಣೆ ಮಾಡು ನೀ ||
ಶಿವನೆ ನಾನು ಎಂದು ಜಲಂಧರ ಭುವನಮಾತೆಯ ಮುಂದೆ ನಿಂದ
ಅವನ ಹೆಂಡತಿ ಮಾನ ಕೆಡಿಸಿ ಕೊಂದೆಮಲೋಕವ ಹೊಂದಿದ
ಧ್ರುವನ ಪಿತ ಕೈ ಬಿಡಲು ಶ್ರೀ ರಾಘವನ ಚರಣಗಳನ್ನು ಭಜಿಸಿ ಮಾ-
ಧವನ ಕೈಯಲ್ಲಿರುವ ಲೋಕವ ಪಡೆದು ಸುಖಿಯಾಗಿರುವುದರಿಯ ||
ವಾಸುದೇವ ನಾನೆಂಬ ಪೌಂಡ್ರಕ ನಾಶವಾದನು ಮುಂದಿನಿಂದ
ರೋಷದಿಂದಲಿ ದಾಸರಾಗದ ಅಸುರರಿಗೆ ಅಂತಕ
ಭೂಸುರಪ್ರಿಯ ವಾಸುದೇವನು ದಾಸದಾಸರ ಪೋಷಕಾಗಿರೆ
ಆಸೆಯಿಂದಲಿ ಭಜಿಸು ಶ್ರೀನಿವಾಸ ಪುರಂದರವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments