ಸಾಕು ಸಾಕಿನ್ನು ಸಂಸಾರ ಸುಖವು
(ರಾಗ ಮುಖಾರಿ ಝಂಪೆ ತಾಳ)
ಸಾಕು ಸಾಕಿನ್ನು ಸಂಸಾರ ಸುಖವು||ಪ||
ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ||ಅ.ಪ||
ಉದಿಸಿದವು ಪಂಚ ಭೂತಗಳಿಂದ ಓಷಧಿಗ-
ಳುದಿಸಿದವು ಓಷಧಗಳಿಂದನ್ನವು
ಉದಿಸಿದವು ಅನ್ನದಿಂ ಶುಕ್ಲ ಶೋಣಿತವೆರಡು
ಉದಿಸಿದವು ಸತಿಪುರುಷರೀರ್ವರೊಳು ಹರಿಯೆ
ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ
ಪತನವಾದಿಂದ್ರಿಯವೆ ಹೊಲೆ ರಕ್ತವು
ಋತುಕಾಲದೊಳಗೆರಡು ಏಕತ್ರ ಸಂಧಿಸಲು
ಗತಿಸಿದುದು ಮಾಸವೊಂದೀರ್ವರೊಳು ಹರಿಯೆ
ಮಾಸವೆರಡಲಿ ಶಿರ ಮಾಸ ಮೂರರೊಳಂಗ
ಮಾಸ ನಾಲ್ಕರಲಿ ಚರ್ಮದ ಹೊದ್ದಿಕೆ
ಮಾಸವೈದಾರಲಿ ನಖ ರೋಮ ನವರಂಧ್ರ
ಮಾಸವೇಳರಲಿ ಹಸಿವು ತೃಷೆ ಹರಿಯೆ
ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳು
ಅಂಗವೆಲ್ಲವ ತಿಳಿದು ಅರಿಕೆಯಿಂದ
ಅಂಗನೆಯುದರಕಿನ್ನೆಂದಿಗೂ ಬಾರೆನೆಂದು
ಹಿಂಗದಲೆ ಧ್ಯಾನಿಸುತ ಕಳೆದೆನೊ ದಿನವ
ಇನಿತು ನವಮಾಸ ಮಲಮೂತ್ರದಾ ಗರ್ಭದಲಿ
ಸಿಲುಕಿರಲು ನರಕದಾಯಾಸದೊಳಗೆ
ಘನಮರುತ ಯೋಗದಿಂ ನರಳುತಿಲ್ಲಿಗೆ ಬಂದು
ಜನಿಸಿ ಮೃತಭಾವದಿಂ ನೊಂದೆನೈ ಹರಿಯೆ
ಧರೆಯ ಮೇಲುದಿಸಿ ಶ್ರೀ ವಿಷ್ಣು ಮಾಯಕೆ ಸಿಲುಕಿ
ಪರವಶದಿ ಹಸಿದು ನೀರಡಿಸಿ ಬೇಗ
ಭರದಿ ಕಣ್ದೆರೆದು ಗೋಳಿಟ್ಟು ಪ್ರಪಂಚವಿದು
ಸ್ಥಿರವೆಂದು ನಂಬಿ ನಾ ಮರುಳಾದೆ ಹರಿಯೆ
ಶಿಶುತನದೊಳಿರಲು ನೊಣ ಮುಸುಕಲದರಿಂದಳಲು
ಹಸಿದನಿವನೆಂದು ಸ್ತನ್ಯವ ಕೊಡುವರು
ಹಸಿ ತೃಷೆಗಳಿಂದಳಲು ಹಾಡಿ ತೂಗುತಲಿಹರು
ಪಶುವಂತೆ ಶಿಶುತನದೊಳಿರಲಾರೆ ಕೃಷ್ಣ
ಬಾಲ್ಯದಲಿ ಕೆಲವು ದಿನ ಬರಿದೆ ಹೋಯಿತು ಹೊತ್ತು
ಮೇಲೆ ಗೋಳಿಟ್ಟು ವಿದ್ಯೆಗಳ ಕಲಿತು
ಮೇಲೆ ಯೌವನ ಬರಲು ತನುಮೂಲವನು ಮರೆತು
ಬಾಲೆಯರ ಬಯಸಿ ನಾ ಮರುಳಾದೆ ಹರಿಯೆ
ಜ್ವರದ ಮೇಲತಿಸಾರ ಬಂದೊದಗುವಂದದಲಿ
ನಿರತ ಕಾಮ ಕ್ರೋಧ ವಿಷಯಂಗಳಲ್ಲಿ
ತರುಣಿಯರಿಗೊಡವೆ ಭಂಗಾರ ಬೇಕೆಂದೆನುತ
ಪರಸೇವೆಯೊಳು ನಾ ಕಡು ನೊಂದೆನಯ್ಯ
ದಿಟ್ಟತನದಲಿ ಗಳಿಸಿ ತರುವಾಗ, ಸತಿಸುತರು
ಕಟ್ಟಿ ಕೊಂಡಿಹರು, ತನುವು ಬಿಟ್ಟ ಬಳಿಕ
ಕುಟ್ಟಿಕೊಂಡಳುತ ಹೋಯೆಂದು ಗೋಳಿಡುತಂಜಿ
ಮುಟ್ಟದೆ ದೂರದಲಿ ನಿಂದಿಹರು ಹರಿಯೆ
ಸತ್ತವರಿಗಳಲೇಕೆ ಸುತ್ತ ಬಂಧುಗಳೆಲ್ಲ
ಸ್ವಸ್ಥವಿರಿ ಹೊತ್ತು ಹೋಯಿತು ಎನುತಲಿ
ಒತ್ತಿಸಿದ ಕಸಕಿಂತ ಅತ್ತತ್ತ ಈ ದೇಹ
ಹೊತ್ತು ಕೊಂಡೊಯ್ದು ಅಗ್ನಿಯಲಿ ಬಿಸುಡುವರು
ದೇವನೇ ನಾನಿನ್ನು ಯೋನಿ ಮಾರ್ಗದ ಒಳಗೆ
ಈ ವಿಧದಿ ಭವಣೆ ಬಡಲಾರೆ ಬಹಳ
ಕಾವ ಕಾರುಣಿಯೆ ನಮ್ಮ ಪುರಂದರವಿಠಲನೆ
ಭಾವ ಭಕುತಿಯ ಕೊಟ್ಟು ರಕ್ಷಿಸೋ ಹರಿಯೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments