ಏನು ಗತಿಯೋ ಎನಗೆ

ಏನು ಗತಿಯೋ ಎನಗೆ

(ರಾಗ ಪೂರ್ವಿ. ಅಟ ತಾಳ.) ಏನು ಗತಿಯೋ ಎನಗೆ, ಎಲೈ ಹರಿ ||ಪ|| ನಾ ನಿನ್ನ ನೆನೆಯದೆ ಮೋಸ ಹೋದೆನಲ್ಲೋ ||ಅ.ಪ|| ಅಂಕದಲಾಡುವ ಶಿಶುವಿನ ಮುದ್ದಾದ ಇಂಬಿನ ನುಡಿಗಳ ಕೇಳುತಲಿ ಕಿಂಕಿಣಿ ಧ್ವನಿಯಿಂದ ಕಿವಿಗೊಟ್ಟು ಕೇಳುವ ಮಂಕಾದ ಹರಿಣನಂತಾದೆನಲ್ಲೊ ಹರಿ || ತೊಡೆ ಕುಚ ಗುಹ್ಯ ಸೌಂದರ್ಯ ಕೊಂಡಾಡುತ ಮಡದಿಯ ಅಂಗ ಸಂಗವ ಮಾಡುತ ಒಡಲ ಕಿಚ್ಚಿಗೆ ಪೋಗಿ ಬಡಿಗಲ್ಲು ಕೆಡಹಿಕೊಂ- ಡಡಗಿದ ಮೂಷಕನಂತಾದೆನಲ್ಲೊ || ಪರ ವನಿತೆಯರ ಲಾವಣ್ಯ ಲೋಚನದಿ ಗೋ- ಚರಿಸಲು ಅವಳ ಕೂಟಕೆ ಬೆರೆತು ಉರಿವ ಕಿಚ್ಚನು ಹಿತವೆಂದು ಬಂದದರೊಳು ಎರಗಿದ ಪತಂಗದಂತಾದೆನಲ್ಲೊ || ಸಲೆ ನಿಜ ವೃತ್ತಿಯ ಜರೆದು ಪರಾನ್ನವ ನಲಿದುಂಡು ಹೊಟ್ಟೆಯ ಹೊರೆಯುತಲಿ ಬಲೆಯ ತುದಿಯಲ್ಲಿದ್ದ ಮಾಂಸಕೆ ಮೋಹದಿ ಸಿಲುಕಿದ ಮೀನಿನಂತಾದೆನಲ್ಲೊ || ಲಂಪಟನಾಗಿ ನಾರಿಯರ ಮುಖಾಬ್ಜದ ಇಂಪನು ಕಣ್ಣಿಂದ ನಾ ನೋಡುತ ಸಂಪಿಗೆ ಅರಳಿನ ಮೇಲೆರಗಿರುವಂಥ ಸಂಪಾಳಿ ಅಳಿಗಳಂತಾದೆನಲ್ಲೊ || ಇನ್ತು ಪಂಚೇಂದ್ರಿಯಗಳು ಒಳ ಹೊರಗೆ ಸಂತತ ಎನ್ನನು ಎಳೆಯುತಿರೆ ಸಂತೈಸಲಾಗದೆ ಸ್ಮರನವರೊಶವಾದ ಕಾಂತೆಯರರಸನಾದೆನಲ್ಲೊ ಹರಿ || ಮಂದನು ನಾನು ಮದನನ ಗೆಲಿದು, ಪನ್ನ್ಚ ಇಂದ್ರಿಯಂಗಳ ನಾನು ಜಯಿಸಲಾರೆ ತಂದೆ ಪುರಂದರ ವಿಟ್ಟಲ ನೀನೊಲಿದಡೆ ಹಿಂದಿನಾ ಭವ ಬಾರದಲ್ಲೊ ಹರಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು