ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ

ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ

(ರಾಗ ಶಂಕರಾಭರಣ. ಆದಿ ತಾಳ) ಮಡಿ ಮಡಿ ಮಡಿಯೆಂದು ಅಡಿಗಡಿಗ್ ಹಾರುವೆ ಮಡಿ ಮಾಡುವ ಬಗೆ ಬೇರುಂಟು ||ಪ|| ಪೊಡವಿ ಪಾಲಕನ ಪಾದ ಧ್ಯಾನವನು ಬಿಡದೆ ಮಾಡುವುದದು ಮಡಿಯು ||ಅ.ಪ|| ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟು ಕೊಂಡರೆ ಅದು ಮಡಿಯಲ್ಲ ಹೊಟ್ಟೆಯೊಳಗಿನ ಕಾಮ ಕ್ರೋಧ ಮದ ಮತ್ಸರ ಬಿಟ್ಟು ನಡೆದರೆ ಅದು ಮಡಿಯು || ದಶಮಿ ದ್ವಾದಶಿ ಪುಣ್ಯ ದಿನದಲಿ ವಸುದೇವ ಸುತನನು ಪೂಜಿಸದೆ ದೋಷಕಂಜದೆ ಪರರನ್ನ ಭುಂಜಿಸಿ ಯಮ- ಪಾಶಕೆ ಸಿಲುಕುವುದದು ಮಡಿಯು || ಹಸಿದು ಭೂಸುರರು ಮಧ್ಯಾಹ್ನ ಕಾಲಕೆ ಕುಸಿದು ಮನೆಗೆ ಬಳಲುತ ಬಂದರೆ ಮಸಣಿಗೊಂದು ಗತಿಯಿಲ್ಲವೆಂದು ತಾ ಹಸನಾಗಿ ಉಂಬೋದು ಹೊಲೆ ಮಡಿಯು || ಇಚ್ಛೆಯಿಂದ ಮಲ ಮೂತ್ರ ಶರೀರವ ನೆಚ್ಚಿ ತೊಳೆಯಲು ಅದು ಮಡಿಯೆ ಅಚ್ಯುತಾನಂತನ ನಾಮವ ನೆನೆದು ಸಂಚಿತ ಕಳೆವುದು ಅದು ಮಡಿಯು || ಹಿರಿಯರ ಗುರುಗಳ ಹರಿ ದಾಸರುಗಳ ಚರಣಕೆರಗಿ ಬಲು ಭಕ್ತಿಯಲಿ ಪರಿಪಾಲಿಸು ಎಂದು ಪುರಂದರ ವಿಠಲನ ಇರುಳು ಹಗಲು ಸ್ಮರಿಸುವುದು ಮಡಿಯು ||
ದಾಸ ಸಾಹಿತ್ಯ ಪ್ರಕಾರ
ಬರೆದವರು