ಚಿಂತೆ ಯಾತಕೋ
(ರಾಗ ಪಂತುವರಾಳಿ. ರೂಪಕ ತಾಳ)
ಚಿಂತೆ ಯಾತಕೋ, ಬಯಲ
ಭ್ರಾಂತಿ ಯಾತಕೋ ||ಪ||
ಕಂತು ಪಿತನ ದಿವ್ಯ ನಾಮ
ಮಂತ್ರವನ್ನು ಜಪಿಸುವವಗೆ || ಅ.ಪ||
ಕಾಲ ಕಾಲದಲ್ಲಿ ಬಿಡದೆ
ವೇಳೆಯರಿತು ಕೂಗುವಂಥ
ಕೋಳಿ ತನ್ನ ಮರಿಗೆ ಮೊಲೆಯ
ಹಾಲ ಕೊಟ್ಟು ಸಲಹಿತೆ
ಸಡಗರದ ನಾರಿಯರು
ಹಡೆಯುವಾಗ ಸೂಲಗಿತ್ತಿ
ಅಡವಿಯೊಳಗೆ ಹೆರುವ ಮೃಗವ
ಹಿಡಿದು ರಕ್ಷಿಸುವರ್ಯಾರು
ಹೆತ್ತ ತಾಯಿ ಸತ್ತು ಹೋಗಲು
ಕೆಟ್ಟೆನೆಂಬರು ಲೋಕ ಜನರು
ಮತ್ತೆ ಗುಂಗುರಿಗೆ ತಾಯಿ
ಹತ್ತಿರಿದ್ದು ಸಲಹಿತೆ
ಗಟ್ಟಿ ಮಣ್ಣ ಶಿಶುವ ಮಾಡಿ
ಹೊಟ್ಟೆಯೊಳಗೆ ಇರಿಸಲಿಲ್ಲ
ಕೊಟ್ಟ ದೈವಕೊಂಡು ಹೋದರೆ
ಕುಟ್ಟಕೊಂಡು ಅಳುವೆಯೇಕೆ
ಪರದಲ್ಲಿ ಪದವಿಯುಂಟು
ಇಹದಲ್ಲಿ ಸೌಖ್ಯವುಂಟು
ಗುರು ಪುರಂದರವಿಠಲನ್ನ
ಸ್ಮರಣೆಯನ್ನು ಮರೆಯದವಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments