ವೀರ ಹನುಮ ಬಹು ಪರಾಕ್ರಮ
(ರಾಗ ಆನಂದಭೈರವಿ. ಅಟ ತಾಳ)
ವೀರ ಹನುಮ ಬಹು ಪರಾಕ್ರಮ ||ಪ||
ಸಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ||
ರಾಮ ದೂತನೆನಿಸಿ ಕೊಂಡೆ ನೀ, ರಾಕ್ಷಸರ
ವನವನೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರ್ಷವಿತ್ತು
ಚೂಡಾಮಣಿಯ ರಾಮಗಿತ್ತು ಲೋಕಕೆ ಮುದ್ದೆನಿಸಿ ಮೆರೆವ
ಗೋಪಿಸುತನ ಪಾದ ಪೂಜಿಸಿ , ಗದೆಯ ಧರಿಸಿ
ಬಕಾಸುರನ ಸಂಹರಿಸಿದೆ
ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ
ಮಧ್ಯಗೇಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ
ಮಸ್ಕರೀಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ ಸನ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments