ಚಿಂತೆ ಯಾತಕೋ
(ರಾಗ ಪಂತುವರಾಳಿ. ರೂಪಕ ತಾಳ)
ಚಿಂತೆ ಯಾತಕೋ, ಬಯಲ
ಭ್ರಾಂತಿ ಯಾತಕೋ ||ಪ||
ಕಂತು ಪಿತನ ದಿವ್ಯ ನಾಮ
ಮಂತ್ರವನ್ನು ಜಪಿಸುವವಗೆ || ಅ.ಪ||
ಒಳ್ಳೆ ಉದಯ ಕಾಲದಲ್ಲಿ
ವೇಳೆಯರಿತು ಕೂಗುವಂಥ
ಕೋಳಿ ತನ್ನ ಮರಿಗೆ ಮೊಲೆಯ
ಹಾಲ ಕೊಟ್ಟು ಸಲಹಿತೆ ||೧||
ಸಡಗರದ ನಾರಿಯರು
ಹಡೆಯುವಾಗ ಸೂಲಗಿತ್ತಿ
(/ಹಿಡಿದು ಸೂಲಗಿತ್ತಿ ಹೆರಿಸೆ)
ಅಡವಿಯೊಳಗೆ ಹೆರುವ ಮೃಗವ
ಹಿಡಿದು ಹೆರಿಸುವವರು ಯಾರು ||೨||
ಹೆತ್ತ ತಾಯಿ ಸತ್ತು ಹೋಗಲು
ಕೆಟ್ಟೆನೆಂಬರು ಲೋಕ ಜನರು
ಮತ್ತೆ ಗುಂಗುರಿಗೆ ತಾಯಿ
ಹತ್ತಿರಿದ್ದು ಸಲಹಿತೆ
( /ಹೆತ್ತತಾಯಿ ಸತ್ತು ಹೋಗೆ
ಮತ್ತೆ ಸಲಹಿರೆಂಬ ಜನರು
ಹುತ್ತಿನೊಳಿರುವ ಹಾವನು
ಹೆತ್ತ ತಾಯಿ ಸಲಹುತಿಹುದೆ) ||೨||
ಗಟ್ಟಿ ಮಣ್ಣ ಶಿಶುವ ಮಾಡಿ
ಹೊಟ್ಟೆಯೊಳಗೆ ಇರಿಸಲಿಲ್ಲ
ಕೊಟ್ಟ ದೈವ ಕೊಂಡು ಹೋದರೆ
ಕುಟ್ಟಿಕೊಂಡು ಅಳುವೆಯೇಕೆ||೩||
ಪರದಲ್ಲಿ ಪದವಿಯುಂಟು
ಇಹದಲ್ಲಿ ಸೌಖ್ಯವುಂಟು
ಗುರು ಪುರಂದರವಿಠಲನ್ನ
ಸ್ಮರಣೆಯನ್ನು ಮರೆಯದವಗೆ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments