ಉಣಲೊಲ್ಲೆ ಯಾಕೋ.
(ರಾಗ ಯದುಕುಲಕಾಂಭೋಜಿ. ಝಂಪೆ ತಾಳ.)
ಉಣಲೊಲ್ಲೆ ಯಾಕೋ ಕಂದ , ಆವ ಗೋವಳತಿಯರ
ಕಣ್ಣು ದೃಷ್ಟಿ ತಾಗಿತಯ್ಯ ||ಪ||
ಅನುದಿನ ನಮ್ಮೆಲ್ಲರ ಅಗಲಬಾರದು ಎಂದು
ಮನಸೋತು ಗೋಪಿಯರು ಮೆಚ್ಚಿ ಮದ್ದಿಕ್ಕಿದರೆ ||ಅ. ಪ||
ಅಸುರೆ ಪೂತನಿಯಿತ್ತ ವಿಷದ ಮೊಲೆಗಳನುಂಡು
ಬಸಿರೊಳಗೆ ಬಲಿತು ಕಲ್ಮಶ ನೆಲೆಸಿತೆ
ಪೊಸ ಜವ್ವನದ ನಾರಿಯರು ಮುದ್ದಿಸಲವರ ಅಧ-
ರಸುಧೆ ನಿನಗೆ ಹಸಿವೆ ಮಾಣಿಸಿತೆ ಕಂದ ||
ಹೊದ್ದಿ ಗೊಲ್ಲರ ಮನೆಯಲ್ಲಿದ್ದಷ್ಟು ಬೆಣ್ಣೆಯನು
ಕದ್ದು ಮೆದ್ದುದಕೆ ಹೊಟ್ಟೆ ತುಂಬಿತೆ
ಅಬ್ಧಿಯೊಳಗಿದ್ದಮೃತ ಅಸುರರಿಗೆ ವಂಚಿಸಿ
ಮೆದ್ದಿಸಲು ಸುರರಿಗೆ ಹಿತವಾಯಿತೆ ಕಂದ ||
ತುರುಗಾಯ್ವ ಗೊಲ್ಲರು ಕಲೆಸಿ ಅನ್ನವ ಕೊಡಲು
ಹರುಷದಿಂದುಂಬೋದತಿ ಪ್ರಿಯವಾಯಿತೆ
ಪರಮ ಭಕ್ತರು ನಿನ್ನ ಪೂಜಿಸುತ ಅರ್ಪಿಸಿದ
ಪರಿ ಪರಿಯ ನೈವೇದ್ಯ ಹಿತವಾಯಿತೆ ಕಂದ ||
ಸಣ್ಣಕ್ಕಿಯೋಗರವು ಸೊಗಸಾದ ಕೆನೆ ಮೊಸರು
ಬಣ್ಣಿಸುತ ನಾನುಣಿಸೆ ಒಲ್ಲದಾಯಿತೆ
ಚಿಣ್ಣ ನಿನ್ನನು ತಮ್ಮ ತೊಡೆಯ ಮೇಲೆತ್ತಿಕೊಂಡಾ
ಹೆಣ್ಣುಗಳು ಉಣಿಸಿದರೆ ಹೊಟ್ಟೆ ತುಂಬುವದೆ ||
ವರ ಮಹಾ ಋಷಿಗಳು ಯಾಚಿಸುತ ತಂದಿತ್ತ
ಪರಿಪರಿಯ ನೈವೇದ್ಯ ಪ್ರಿಯವಾಯಿತೆ
ವರ ಪುರಂದರ ವಿಟ್ಟಲರಾಯನೇ ನೀ ಪೇಳೊ
ನಿರತ ಸಂತುಷ್ಟನೆಂಬುದು ನಿಜವಾಯಿತೇ ಕಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments