ಶ್ರೀ ವೇದವ್ಯಾಸರ ಸ್ತೋತ್ರ ಪದ

ಶ್ರೀ ವೇದವ್ಯಾಸರ ಸ್ತೋತ್ರ ಪದ

ವ್ಯಾಸ ಬದರಿನಿವಾಸ ಎನ್ನಯ ಕ್ಲೇಶ ನಾಶನಗೈಸು ಮೌನೀಷ |

ಸಾಸಿರ ಮಹಿಮನ ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ||

 

ಸತ್ಯವತಿ ವರಸೂನು ಭವತಿದುರ ಭಾನು |ಭೃತ್ಯವರ್ಗದ ಸುರಧೇನು ||

ಸತ್ಯಮೂರುತಿಯು ನೀನು ಸ್ತುತಿಪೆ ನಾನು | ನಿತ್ಯ ನಿನ್ನಂಘ್ರಿಯರೇಣು ||

ಉತ್ತಮಾಂಗದಲಿ ಹೊತ್ತು ಹೊತ್ತಿಗೆ ಸೂಸುತ್ತಿರತಿಗದು ಅತ್ಯಂತ ಸುಖಕರ ||

ಸುತ್ತುವ ಸುಳಿಯಿಂದೆತ್ತಿ ಕಡೆಗೆಯಿಡು | ಎತ್ತ ನೋಡಲು ವ್ಯಾಪುತ ಸದಾಗಮ || ೧ ||

 

ಲೋಕ ವಿಲಕ್ಷಣ ಋಷಿ ಗುಣವಾರಿ | ರಾಸಿ ವೈಕುಂಠ ನಗರ ನಿವಾಸಿ ||

ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ | ಬೇಕೆಂದು ಭಜಿಪೆ ನಿಲಿಸಿ ||

ಶೋಕ ಮಾಡುವುದು ಅನೇಕ ಪರಿಯಿಂದ | ಆ ಕುರುವಂಶದ ನಿಕರ ತರಿಸಿದೆ ||

ಭೂಕಾಂತರು ನೋಡೆ ಸಾಕಾರ ದೇವ | ಕೃಪಾಕರ ಮುನಿ ದಿವಾಕರಭಾಸ || ೨ ||

 

ಸ್ಮರಿಸಿದವರ ಮನೋಭಿಷ್ಟ | ವಾಶಿಷ್ಟ ಕೃಷ್ಣ | ನಿರುತ ಎನ್ನಯ ಅರಿಷ್ಟ ||

ಪರಿಹರಿಸುವುದು ಕಷ್ಟದೊಳತ್ಕ್ರುಷ್ಟ | ಮೆರೆವ ಉನ್ನತ ವಿಶಿಷ್ಟ ||

ಸುರನರ ಉರಗ ಕಿನ್ನರ ಗಂಧರ್ವರೂ | ಕರಕಮಲಗಳಿಂದ ವರಗೊಂಬ ||

ಸಿರಿ ಅರಸನೆ ನಮ್ಮ ವಿಜಯವಿಠಲ ಪರ | ಶರಸುತ ಬಲು ವಿಸ್ತಾರ ಜ್ಞಾನಾಂಭುದೆ || ೩ ||

 

ದಾಸ ಸಾಹಿತ್ಯ ಪ್ರಕಾರ
ಬರೆದವರು