ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು

ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು

( ನಾಟಿ ರಾಗ ಖಂಡಛಾಪು ತಾಳ) ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ||ಪ|| ಶಿರದಲೊಪ್ಪುವ ನೀಲಕುಂತಳಕೆ ಶರಣು ಸಿರಿ ಸಹೋದರನರ್ಧದವಳಿಗೆ ಶರಣು ||ಅ.ಪ|| ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು ಸಂಪಿಗೆಯ ಕುಸುಮಸಮ ನಾಸಿಕಕೆ ಶರಣು ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು ಇಂಪುದರ್ವಣನಿಭ ಕಪೋಲಗಳಿಗೆ ಶರಣು ||೧|| ಕುಂದಕುಟ್ಮಲ ಪೋಲ್ವ ದಂತಪಕ್ತಿಗೆ ಶರಣು ಅಂದವಾಗಿರುವ ಬಿಂಬೋಷ್ಠಕೆ ಶರಣು ಚಂದ್ರಿಕಾನಿಭ ಮುದ್ದು ಮಂದಹಾಸಕೆ ಶರಣು ನಂದಗೋಪನ ಮುದ್ದು ಕಂದನಿಗೆ ಶರಣು ||೨|| ಅಬ್ಜನಾಭನ ದಿವ್ಯ ಕಂಬು ಕಂಠಕೆ ಶರಣು ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು ಕುಬ್ಜೆಯ ಡೊಂಕ ತಿದ್ದಿದ ಭುಜಗಳಿಗೆ ಶರಣು ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩|| ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು ಪೊನ್ನ ಕದಳೀ ಪೋಲ್ವ ತೊಡೆಗಳಿಗೆ ಶರಣು ಪುನ್ನಾಗಕರಗೆತ್ತ ದ್ವಯ ನಿತಂಬಕೆ ಶರಣು ಚೆನ್ನಾಗಿ ಕಾಣುವ ಸಮಜಾನುವಿಗೆ ಶರಣು ||೪|| ಮಂಗಳ ವೈಭೋಗಂಗಳ ಅಂಘ್ರಿದ್ವಯಕೆ ಶರಣು ತುಂಗ ಕುಚಗಳ ಪಿಡಿದ ಕರಗಳಿಗೆ ಶರಣು ಪೊಂಗೊಳಲನೂದುವಾ ಅಂಗುಲಿಗಳಿಗೆ ಶರಣು ರಂಗವಿಠಲನ ಸರ್ವಾಂಗಕೆ ಶರಣು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು