ಕೀರ್ತಿಸಿ ಜನರೆಲ್ಲ ಹರಿಯ ಗುಣ
(ರಾಗ ಸುರಟಿ, ಆದಿತಾಳ)
ಕೀರ್ತಿಸಿ ಜನರೆಲ್ಲ ಹರಿಯ ಗುಣ ||ಪ||
ಕೀರ್ತಿಸಿ ಜನರು ಕೃತಾರ್ಥರಾಗಿರೊ ||ಅ.ಪ||
ಅವನು ವನದೊಳಗೆ ನಿತ್ಯದಿ
ಬಾಹ ಜನರ ಬಡಿದು
ಜೀವನ ಮಾಳ್ಪ ಕಿರಾತನು ಕೀರ್ತಿಸೆ
ತಾ ಒಲಿದಾತನ ಕೋವಿದನೆನಿಸಿದ ||೧||
ಅವನ ಪಾದರಜ ಸೋಕಲು
ಆ ವನಿತೆಯ ಜಡ
ಭಾವನ ತೊಲಗಿಸಿ ಆ ವನಿತೆಯನು
ಪಾವನ ಮಾಡಿದ ದೇವಾಧಿದೇವನ ||೨||
ಅಂದು ಶಬರಿ ತಾನು ಪ್ರೇಮದಿ
ತಿಂದ ಫಲವ ಕೊಡಲು
ಕುಂದು ನೋಡದೆ ಆನಂದದಿ ಗ್ರಹಿಸಿ
ಕುಂದದ ಪದವಿಯನಂದು ಕೊಟ್ಟವನ ||೩||
ದುಷ್ಟರಾವಣ ತಾನು ಸುರರಿಗೆ
ಕಷ್ಟಬಡಿಸುತಿರಲು
ಪುಟ್ಟಿ ಭುವನದೊಳು ಕುಟ್ಟಿ ಖಳರ ಸುರ-
ರಿಷ್ಟವ ಸಲಿಸಿದ ಸೃಷ್ಟಿಗೊಡೆಯನ ||೪||
ತನ್ನ ನಂಬಿದ ಜನರ ಮತ್ತೆ ತಾ-
ನನ್ಯರಿಗೊಪ್ಪಿಸದೆ
ಮುನ್ನಿನಘವ ಕಳೆದಿನ್ನು ಕಾಪಾಡುವ
ಘನ್ನಮಹಿಮ ಶ್ರೀರಂಗವಿಠಲನ್ನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments