ಇನ್ನಿವನು ಈಗ ಬರಲಿದಕೆ ಬಗೆಯೇನು

ಇನ್ನಿವನು ಈಗ ಬರಲಿದಕೆ ಬಗೆಯೇನು

(ರಾಗ ಮುಖಾರಿ ಝಂಪೆತಾಳ) ಇನ್ನಿವನು ಈಗ ಬರಲಿದಕೆ ಬಗೆಯೇನು ಚೆನ್ನಾಗಿ ಪೇಳೆ ರಮಣಿ ||ಪ|| ಮನ್ನಿಸಿ ಮಮತೆಯಲಿ ಮನವ ಸೆಳೆಕೊಂಡೊಯ್ದ ಅನ್ಯರನು ಕೂಡುವನೆ ಕೆಳದಿ ಕೆಳದಿ ||ಅ.ಪ|| ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳ ಚಿನ್ನದ ಶ್ರೀರೇಖೆ ಸೀರೆ ಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣ ಕರ್ಪೂರ ಕಾಚಿನುಂಡೆ ಕಣ್ಣಿಗಿಂಪಾದ ಕಡುಚೆಲ್ವ ಮಲ್ಲಿಗೆ ಮೊಗ್ಗೆ ಉನ್ನತವಾದ ದಂಡೆ ಇನ್ನು ಈ ಪರಿಮಳವು ಬಗೆಬಗೆಯ ಆಭರಣ ರನ್ನ ಕೆತ್ತಿಸಿದ ಗೋಡೆ ಮುನ್ನ ಸಿಂಗರ ಮಾಡಿ ಎದೆ ಹಿಡಿದು ಬಿಗಿಯಪ್ಪಿ ನಿನ್ನೆ ಈ ವೇಳೆ ಕೂಡಿದ ದೃಢದೆ ||೧|| ಈಗಾಗ ಬಾಹನೆಂತಿರುವೆ ತಾನೂರಿದ್ದ ಉಗುರು ಗುರುತನು ನೋಡುತ ಸೋಗೆಗಣ್ಣಿನ ಕಾಡಿಗೆಯ ಕಲಕಿದನೆಂದು ಬೇಗ ನಟನೆಯ ಮಾಡುತ ರಾಗದಿಂದಲಿ ರವಿಕೆನೆರಿಯನು ಬದಲುಟ್ಟು ಭೋಗಕೆ ಅನುವಾಗುತ ಹೀಗೆ ಸಿಂಗರಿಸಿಕೊಂಡಿಷ್ಟು ಹೊತ್ತನು ಕಳೆದೆ ಹೇಗೆ ಸೈರಿಪೆ ಕೂಡದೆ ಮುಂದೆ ||೨|| ಇಂದಲ್ಲದಿರೆ ನಾಳೆ ಬಹನೆಂದು ಇದ್ದರೆ ಕಂದರ್ಪ ಕಾಡುತಿಹನೆ ತಂದು ತೋರಿಸು ತನ್ನ ತಂದೆಯನೆಂದು ಪೂ- ವಿಂದ ಬಾಣವ ಎಸೆವನೆ ಇಂದುಬಿಂಬವು ಮಂದಮಾರುತವು ಸುಮದ ಮಳೆ- ಯಿಂದ ಸೆಕೆಗಾನಾರೆನೆ ಒಂದು ನಿಮಿಷದಲಿ ಶ್ರೀರಂಗವಿಠಲನನ್ನು ಹೊಂದಿಸೆನ್ನಗಲದಂತೆ ಕಾಂತೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು