ನಿನ್ನಾಧೀನ ಶರೀರ ಕರಣ ಚೀಷ್ಟೆಗಳೆಲ್ಲ

ನಿನ್ನಾಧೀನ ಶರೀರ ಕರಣ ಚೀಷ್ಟೆಗಳೆಲ್ಲ

(ಸಾರಂಗರಾಗ , ಧ್ರುವತಾಳ) ನಿನ್ನಾಧೀನ ಶರೀರ ಕರಣ ಚೀಷ್ಟೆಗಳೆಲ್ಲ ನಿನ್ನಾಧೀನ ಬಂಧ ಮೋಕ್ಷ ನಿರಯಗಳು ನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲ ನಿನ್ನಾಧೀನ ಸುಕೃತ ದುಷ್ಕೃತ ಫಲವು ನಿನ್ನಾಧೀನ ವಿಷಯಾತ್ಮ ಬುದ್ಧಿಗಳೆಲ್ಲ ನಿನ್ನಾಧೀನ ಚರಾಚರವೆಂದು ಶ್ರುತಿ ಸಾರುತಲಿವೆ ಇಂತು ಪುಣ್ಯಪಾಪವೆಲ್ಲ ನಿನ್ನ ಲೇಪಿಸವೋ ದೇವ ಎಂತು ಜೀವರನು ಪುಣ್ಯಪಾಪಂಗಳನುಣಿಸುವೆ ಅಂತರಾತ್ಮನೆನ್ನ ಮಹಿಮೆಗೆ ನಮೋ ಎಂಬೆ ಎಂತೋ ಚಿತ್ತವಿನ್ನೆಂತೋ ಪಾಲಿಸೋ ರಂಗವಿಠಲ (ಮಠ್ಯ ತಾಳ) ಮುನ್ನ ನಿನ್ನ ಚರಣಕಮಲವ ನಂಬಿದೆ ಭವಭವಂಗಳಲಿ ಬಂದೆನೊ ಪನ್ನಗೇಶಶಯನ ಶ್ರೀ ಹರೇ ಇನ್ನು ಬಿಡೆನು. ಬಿಡೆನಯ್ಯ ಸಂಪನ್ನ ಎನ್ನ ಗುಣದೋಷವರಸದೆ ಇನ್ನು ಕಾಯೊ ರಂಗವಿಠಲ (ರೂಪಕತಾಳ) ಕರಣಗಳು ಬಿಡದೆ ತಮ್ಮ ತಮ್ಮ ವಿಷಯಂಗಳಿಗೆ ಎಳೆಯುತಲಿವೆ ಎನ್ನ ಹರಣ ನಿನ್ನದು ಕರುಣಾಕರನೇ ಈ ಧರೆ ರವಣ ಮಾಣಿಸೋ ಹರಿಯೇ ನಿನ್ನ ಚರಣಭಕುತರ ಶರಣನಾದೆನು ಹೊರೆವುದುಎನ್ನ ರಂಗವಿಠಲರೇಯ (ಅಟ್ಟತಾಳ) ಬಂದು ಬಂದು ನಾನಾ ಭವದಲ್ಲಿ ಬೆಂದೆನಯ್ಯ ನಂದನಂದನ ಇಂದಿರಾನಂದ ಕುಂದ ಶುದ್ಧ ಧವಳದಂತೆ ಮಂದಹಾಸ ನಂದನ ಕಂದ ಇಂದಿರಾನಂದ ಇಂದೆನ್ನ ಸಲಹಯ್ಯ ರಂಗವಿಠಲ ( ಏಕತಾಳ) ಹರಿಯೇನಿನ್ನ ಒಮ್ಮೆ ನೆನೆದವ ನರಕವ ಹೊಗನಂತೆ ಆನು ಒಮ್ಮೆ ಇಮ್ಮೆ ನೆನೆವೆನಯ್ಯ ಆನು ನಿನ್ನ ನಂಬಿದೆ ಕರುಣಿಗಳರಸ ಹೊರೆದೆನ್ನ ಕಾಯೊ ರಂಗವಿಠಲ (ಜತೆ) ಮಂಗಳ ಮಹಿಮ ಭುಜಂಗಶಯನ ನಮೋ ಜಂಗುಳಿದೈವದ ಗಂಡರಂಗವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು