ಈ ವನದೆಡೆಗಳು ಈ ಲತೆವನಗಳು

ಈ ವನದೆಡೆಗಳು ಈ ಲತೆವನಗಳು

(ಭೈರವಿ ರಾಗ ) ( ಧ್ರುವತಾಳ) ಈ ವನದೆಡೆಗಳು ಈ ಲತೆವನಗಳು ಈನದಿಪುಳಿನಗಳೀ ಶಶಿಶಿಲೆಗಳು ಸುರತರು ನೆಳಲು ಶುಕಪಿಕರವ ಯಾಕೆ ಮಾಧವನ ಮರೆಯಲೀಯದಿವೆ ಕೆಳದಿ ಆ ಮುಗುಳುನಗೆಯ ಆ ಸೊಬಗ ಈಸುರತರು ನೆಳಲೀ ರತಿಯ ಈ ಸುರತವನರಿದ ಬಾಲೆಯರೆಂತೊ ಈ ಸುಗುಣಮಯ ರಂಗವಿಠಲನೆ ಕೆಳದಿ ೧ (ಮಠ್ಠ್ಯ ತಾಳ) ಇನ್ನು ರಂಗನಂಗಸಂಗವು ಎತ್ತಣದು ಗೋಪಿಯರಿಗೆ ಮಧುರೆಯ ಮಾನಿನಿಯರ ಬಲೆಯಲ್ಲಿ ಸಿಲುಕಿದನ ಮಧುರೆಯ ಮಾನಿನಿಯರು ರತಿವಿದಗ್ಧರಾ ವಧುಗಳು ರಸಿಕ ನಮ್ಮ ರಂಗವಿಠಲ ೨ (ತ್ರಿಪುಟ ತಾಳ) ಇನ್ಯಾತಕೆ ರಂಗ ಇಲ್ಲಿಗೆ ಬಾಹಾ ಮಧುರಾಪುರಿಯರಸನಾದ ಮಲ್ಲರ ಕೊಂದು ಮಾವನ್ನ ಮಡುಹಿದ ಮಧುರಾಪುರಿಯರಸನಾದ ಅವನ ನೆನಹೆ ಸಾಕು ರಂಗವಿಠಲನಾ ೩ (ರೂಪಕತಾಳ) ಬಿಡುವರು ಅಧನರ ಗಣಿಕೆಯರು ನೆರೆ ಬಿಡುವವು ವಿಫಲ ತರುವ ದ್ವಿಜಗಣ ಬಿಡುವವು ಮೃಗ ದಳ್ಳುರಿಗೊಂಡಡವಿಯ ಬಿಡುವನು ಜಾರ ಪರವಧುವನು ನೆರೆದಿನ್ನು ಇವು ದಿಟವಾಯಿತು ನಮ್ಮ ವಲ್ಲಭನೊಳು ಅಕಟಕಟಾ ರಂಗವಿಠಲನ ಕರುಣಿಯೆ ೪ (ಅಟ್ಟತಾಳ) ಕುಂದಕುಸುಮ ಶಶಾಂಕ ರಂಜಿತ ವೃಂದಾವನದಲ್ಲಿ ಮಂದಮಾರುತ ಬರಲು ನಲಿದನು ಅರ- ವಿಂದನಯನನು ಹಾ ಹಾ ಕಂದಿದೆವು ಕುಂದಿದೆವು ನಾವು ಕಂದರ್ಪನ ಶರದಟ್ಟುಳಿಗೆ ಹಾ ಇಂದುಮುಖಿಯರ ವೃಂದದೊಳಗೆ ಕೃಷ್ಣಾ ಅಂದು ನಮ್ಮೊಡನಾಡಿದ ಪರಿಯನು ತಾನು ಇಂದೊಮ್ಮೆಯಾದರು ನೆನೆವನೆ ಹಾ ಹಾ ಎಂದಿಗಾದರು ರಂಗವಿಠಲನಿಲ್ಲಿಗೆ ಬಹನೆ ೫ (ಝಂಪೆತಾಳ) ಪೊಂದೇರದೆಲ್ಲಿಯದವ್ವಾ ಬಂದಿದೆ ವ್ರಜದೊಳಗೆ ಅದಿನಕ್ರೂರನೆಂಬ ಕ್ರೂರನು ಮರಳಿ ಬಂದನೊ ನಮ್ಮ ಕರೆದೊಯ್ಯಲಿಬೇಕೆಂದು ಅಂದೆಮ್ಮ ಕೊಂದ ಇಂದ್ಯಾರ ಕೊಲ್ಲಲಿ ಬಂದ ಕೊಂದು ಕೊಳ್ಳಲಿ ತಮ್ಮ ಹಿರಿಯರನು ಹರಲಿಗ ಅಂದೆಮ್ಮನಗಲಿಸಿದ ರಂಗವಿಠಲನಾ ೬ (ಏಕತಾಳ) ಹೆತ್ತ ತಾಯಿ ತಂದೆಯರ ನೋಡಲೆಂದು ಇತ್ತಲಟ್ಟಿದನೆ ಉದ್ಧವ ನಿನ್ನ ಗೋವಳಾ ಮತ್ಯಾರುಂಟು ವ್ರಜದಲ್ಲಿ ನೆನೆವರು ಹತ್ತಿರಕೆ ತನ್ನವರಲ್ಲಿ ತಾ ಬಿಡುವನೆ ಅರ್ಥಕೃತ ಸ್ನೇಹ ನಮ್ಮೊಡನೆ ಮಾಡಿದ ಕೃಷ್ಣ ಮತ್ತಳಿಗೆ ಕುಸುಮದ ನೇಹದಂತೆ ರಕ್ತಿ ಎಮ್ಮೊಳುಂಟು ರಂಗವಿಠಲಗೆ ೭ (ಝಂಪೆತಾಳ) ಪರಮಸುಖದಾಸೆ ಈತನ ಸೇವೆ ಅಲ್ಲವೆ ಒರೆದಳೆ ಪಿಂಗಳೆ ಜನರಿಗೆ ಹಿತವನು ಅರಿದರಿದು ಬಿಡುವ ನಾವು ನರಪಶುಗಳಲ್ಲವೆ ಸಿರಿರಮಣಿ ಬಿಡಳು ನಮ್ಮ ರಂಗವಿಠಲನ್ನ ೮ (ಏಕತಾಳ) ಎಮ್ಮ ತನು ಮನ ತನ್ನಧೀನವಲ್ಲೆ ಅನ್ಯವರಿಯೆವು ತನ್ನರಿದಂತೆ ಮಾಡಲಿ ಎಮ್ಮಸುವು ತನ್ನಧೀನವಲ್ಲೆ ಅನ್ಯವರಿಯೆವು ತನ್ನರಿದಂತೆ ಮಾಡಲಿ ನಮ್ಮ ರಂಗವಿಠಲರೇಯಗೆ ಇನ್ನು ಸಲೆ ಮಾರುಹೋದೆವೆ ಕೆಳದಿ ೯ (ಜತೆ) ಅವನ ಹಂಬಲವೆಮಗೆ ಜೀವನವವ್ವಾ ಭುವನಮೋಹನ ರಂಗವಿಠಲನು ಕರುಣಿಯೆ
ದಾಸ ಸಾಹಿತ್ಯ ಪ್ರಕಾರ
ಬರೆದವರು