ತಾನಾ ತಂದನಾನಾ ತಾನಾ ತಂದನಾನಾ
( ಜಾನಪದ ಧಾಟಿ )
ತಾನಾ ತಂದನಾನಾ ತಾನಾ ತಂದನಾನಾ
ತಾನಾ ತಂದನಾನಾ ತಾನಾ ತಂದನಾನಾ ||ಧ್ರುವ ||
ಬಲ್ಲೆಬಲ್ಲೆನೆಂಬರು ಬಲ್ಲರಿಯದಿಹರು
ಬಲ್ಲರೆ ನೀವಿನ್ನು ಹೇಳುವದು ತಾನಾ ||೧||
ಕಣ್ಣು ಕಾಂಬುವದೇನು ಕಣ್ಣಿನೊಳಿಹುದೇನು
ಕಣ್ಣು ಕಾಂಬುವ ಗತಿ ತಿಳಿಯುವದು ತಾನಾ ||೨||
ಕಿವಿಯು ಕಿವಿಯೆಂಬುವದೇನು ಕಿವಿಯು ಕೇಳುವದೇನು
ಕಿವಿಯು ಕೇಳುವ ಗತಿ ತಿಳಿಯುವದು ತಾನಾ ||೩||
ಮೂಗು ಮೂಗೆಂಬುದೇನು ಮೂಗಿನೊಳಾಡುವದೇನು
ಆಡುವ ಗತಿಗಳ ತಿಳಿಯುವದು ತಾನಾ ||೪||
ಬಾಯಿ ಬಾಯೆಂಬುದೇನು ಬಾಯಿಯೊಳ ನುಡಿವದೇನು
ಬಾಯಿ ನುಡಿವ ಗತಿ ತಿಳಿಯುವದು ತಾನಾ ||೫||
ದೇಹ ದೇಹೆಂಬುದೇನು ದೇಹದೊಳಿಹುದೇನು
ದೇಹದೊಳಿಹ ವಸ್ತು ತಿಳಿಯುವದು ತಾನಾ ||೬||
ಪ್ರಾಣವೆಂಬುದೇನು ಕರಣವೆಂಬುದೇನು
ತತ್ವಗಳೆಂಬುದೇನು ತಿಳಿಯುವದು ತಾನಾ ||೭||
ಜೀವ ಅಂಬುದೇನು ಜೀವಭಾವಗಳೇನು
ಜೀವ ಶಿವದ ಗತಿ ತಿಳಿಯುವದು ತಾನಾ ||೮||
ಅರುವ್ಹೆಂಬುದೇನು ದುರವ್ಹೆಂಬುದೇನು
ಇದರೊಳು ಖೂನ ಕುರುಹು ತಿಳಿಯುವದು ತಾನಾ||೯||
ಕನಸುವಂಬುದೇನು ಕನಸು ಕಾಂಬುವದೇನು
ಕನಸು ಹೇಳುವದೇನು ತಿಳಿಯುವದು ತಾನಾ ||೧೦||
ಹಗಲು ಎದ್ದಿಹದೇನು ಇರುಳು ಮಲಗುವದೇನು
ಇದರ ಹಗರಣವನು ತಿಳಿಯುವದು ತಾನಾ ||೧೧||
ಹುಟ್ಟಿ ಬಾಳುವದೇನು ಸತ್ತು ಹೋಗುವದೇನು
ಸತ್ತು ಹುಟ್ಟುವದೇನು ತಿಳಿಯುವದು ತಾನಾ ||೧೨||
ಹೆಣ್ಣು ಗಂಡೆಂಬುವದೇನು ಹೆಣ್ಣುಗಂಡು ಕೂಡುವದೇನು
ಕೂಡುವದೇನೆಂದು ತಿಳಿಯುವದು ತಾನಾ ||೧೩||
ಅನುಭವಗಳ ಗತಿಗಳ ತಿಳಿಯಲು ಆತ್ಮದೊಳು
ತಿಳಿಯಲು ಜನ್ಮವು ಅಳಿಯುವದು ತಾನಾ ||೧೪||
ಆತ್ಮ ಅನುಭವವು ತಿಳಿಯುವದು ಗುರುಕೃಪೆಯು
ತಿಳಿಯಲು ಜೀವನ್ಮುಕ್ತಿಯು ತಾನಾ ||೧೫||
ಮಹೀಪತೆಂಬ್ಹೆಸರನು ಕರೆದರೋ ಎಂಬುವದೇನು
ಓ ಎಂಬುವದೆನಗಿನ್ನು ತಿಳಿಯಿತು ತಾನಾ ||೧೬||
ಇಂತು ಪರಿಯಾಯವು ತಿಳುಹಿದ ಗುರುರಾಯ
ಎನ್ನೊಳು ಭಾಸ್ಕರ ಗುರು ತಾನೆ ತಾನಾ ||೧೭||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments