ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ
(ಬಿಹಾಗ್ ರಾಗ ದಾದರಾ ತಾಳ)
ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ
ನಿತ್ಯವಾಗಿ ಪೂರ್ಣಬೆರೆತು ಕೂಡುವಾ ಬನ್ನಿ ಗುರ್ತದಿಂದ ||ಧ್ರುವ||
ಸೂರ್ಯನಿಲ್ಲದೆ ಸುಪ್ರಕಾಶ ತುಂಬಿದೆ ಹೇಳತೀನ
ತೂರ್ಯಾವಸ್ಥೆಯೊಳು ಬೆರೆದು ಕೂಡಿದೆ ಜ್ಞಾನಿಬಲ್ಲ ಖೂನ
ಬರಿಯ ಮಾತನಾಡಿ ಹೊರೆಯ ಹೇಳುವದಲ್ಲ ಅರಹು ಸ್ಥಾನ
ಪರಿಯಾಯದಿಂದ ಪರಿಣಮಿಸಿ ನೋಡಿ ಪರಮಪ್ರಾಣ ||೧||
ಚಂದ್ರನಿಲ್ಲದೆ ಬೆಳದಿಂಗಳು ಬಿದ್ದಿದೆ ಬಹಳ
ಇಂದ್ರಾದಿಗಳೆಲ್ಲ ಹರುಷದಿ ನೋಡುವರು ಸರ್ವಕಾಲ
ಸುಂದರವಾದ ಸುವಸ್ತು ಒಳಗೊಂಡಿದೆ ಅಚಲ
ಸಾಂದ್ರವಾಗಿ ಸುಖ ತುಂಬಿ ತುಳುಕುತಿದೆ ಥಳ ಥಳ ||೨||
ಮನದ ಕೊನೆಯಲಿದ್ದ ಘನಸುಖ ನೋಡಿರೋ ನೆನೆದು ಬೇಗ
ಸ್ವಾನುಭವದಲನುಭವಿಸುವದು ಬ್ರಹ್ಮಭೋಗ
ನಾ ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ
ದೀನ ಮಹಿಪತಿಸ್ವಾಮಿ ತಾನೆತಾನಾದ ಸದ್ಗುರುವೀಗ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments