ಕಾಣಬಹುದಕೆ ಕನ್ನಡಿ ಯಾಕೆ
(ಭೈರವಿ ರಾಗ ದಾದರಾ ತಾಳ)
ಕಾಣಬಹುದಕೆ ಕನ್ನಡಿ ಯಾಕೆ , ಭಿನ್ನವಿಲ್ಲದೆ ನೋಡಿ
ತನ್ನೊಳು ಘನಬ್ರಹ್ಮವಿರಲಿಕ್ಕೆ ಅನುಮಾನವು ಬ್ಯಾಡಿ ||ಧ್ರುವ||
ಕುಂಭಿನಿಯೊಳು ಘನಹೊಳೆಯುತ ತುಂಬಿ ತುಳುಕುತಲ್ಯಾದೆ
ಉಂಬವರಿಗಿದಿರಿಡುತ ಬಿಂಬಿಸುತಲ್ಯಾದೆ
ಹಂಬಲಿಸಿದರೆ ತನ್ನೊಳಗೆ ತಾ ಗುಂಭಗುರುತವಾಗ್ಯಾದೆ
ಡಿಂಬಿನೊಳಗೆ ನಿಜದೋರುತ ಇಂಬು ತಾನೆ ಆಗ್ಯಾದೆ ||೧||
ಹೇಳುವ ಮಾತಿನ ಮಾತಿಲ್ಲ ಕೇಳಿರಯ್ಯ ಚೆನ್ನಾಗಿ
ಒಳಹೊರಗಿದು ಭಾಸುತಿಹುದೆಲ್ಲಾ ಸುಳುವು ಬಲ್ಲಾತ ಯೋಗಿ
ಕಳೆಕಾಂತಿಗಳ ಅನುಭವವೆಲ್ಲಾನು ತಿಳಿಯಬಲ್ಲವ ಭೋಗಿ
ಹೊಳೆವುತಿಹುದು ಸರ್ವಮಯವೆಲ್ಲಾ ಮೊಳೆಮಿಂಚು ತಾನಾಗಿ ||೨||
ಇಲ್ಲೆವೆ ಎರಡು ಹಾದಿಯ ಕಟ್ಟಿ , ಗುಲ್ಲುಮಾಡದೆ ನೋಡಿ
ಮ್ಯಾಲಿಹ ಸ್ಥಾನಸ್ಥಾನವ ಮುಟ್ಟಿ ಮೂಲಸ್ಥಾನವ ಕೂಡಿ
ಗೋಲ್ಹಾಟ ಮಂಡಲವನು ದಾಟಿ ಅಲ್ಲಿಯೆ ಮಹಿಪತಿ ನೋಡಿ
ಅಲ್ಲಿಯೆ ಮನ ತಾಂ ಮನಿಕಟ್ಟಿ ಫುಲ್ಲನಾಭನ ಕೂಡಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments