ಆರು ಹಿತವರು ನಿಮಗೆ ಈ ಮೂವರೊಳಗೆ ?
(ರಾಗ ಮುಖಾರಿ ಝಂಪೆತಾಳ)
ಆರು ಹಿತವರು ನಿಮಗೆ ಈ ಮೂವರೊಳಗೆ ?
ನಾರಿಯೊ ಧಾರಿಣಿಯೊ ಬಲುಭವದ ಸಿರಿಯೊ ? ||
ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು
ತನ್ನ ಮನೆಗವಳ ಯಜಮಾನಿಯೆನಿಸಿ
ಭಿನ್ನವಲ್ಲದಲರ್ಧ ದೇಹವೆನಿಸುವ ಸತಿಯು
ಕಣ್ಣಿನಲಿ ನೋಡಲಮ್ಮಳು ಕಾಲವಶದಿ ||
ಮುನ್ನ ಶತಕೋಟಿ ರಾಯರುಗಳಾಳಿದ ನೆಲವ
ತನ್ನದೆಂದೆನುತ ಶಾಸನವ ಬರೆಸಿ
ಬಿನ್ನಣದ ಮನೆಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನಸುವಳಿಯೆ ಹೊರಗೆ ಹಾಕುವರು ||
ಉದ್ಯೋಗ ವ್ಯವಹರ ನೃಪಸೇವೆ ಕುಶಲಗತಿ
ಕ್ಷುದ್ರತನ ಕಳವು ಪರದ್ರೋಹದಿಂದ
ಬುದ್ಧಿಯಿಂದಲೆ ಗಳಿಸಿ ಸಿಕ್ಕಿದಂಥರ್ಥವನು
ಸದ್ಯದಲ್ಲಾರು ಉಂಬುವರು ಹೇಳು ಮನುಜ ||
ಶೋಕವನು ಗೈಯುವರು ಸತಿಸುತರು ಬಾಂಧವರು
ಜೋಕೆ ತಪ್ಪಿದ ಬಳಿಕ ಅರ್ಥ ವ್ಯರ್ಥ
ಲೋಕದೊಳು ಗಳಿಸಿದ ಪುಣ್ಯಪಾಪಗಳೆರಡು
ಸಾಕಾರವಾಗಿ ಸಂಗಡ ಬಾಹೋದಲ್ಲದೆ ||
ಅಸ್ಥಿರದ ದೇವನು ನೆಚ್ಚಿ ನಂಬಲು ಬೇಡ
ಸ್ವಸ್ಥದಲಿ ನೆನೆ ಕಂಡ್ಯ ಹರಿಪಾದವ
ಚಿತ್ತದೊಳು ಶುದ್ಧಿಯಿಂ ಪುರಂದರವಿಠಲನೇ
ಉತ್ತಮೋತ್ತಮನೆಂದು ಸುಖಿಯಾಗು ಮನುಜ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments