ಇದೇ ನೋಡಿ ಸ್ವತಃ ಸಿದ್ಧ ಮಡಿ
( ರಾಗ -ದುರ್ಗಾ ತಾಳ-ದಾದರಾ )
ಇದೇ ನೋಡಿ ಸ್ವತಃ ಸಿದ್ಧ ಮಡಿ
ಸದಾ ಸರ್ವದಾ ಇದೇ ಮಾಡಿ ||ಧ್ರುವ||
ಅರಹು ಎಂಬುದೆ ಮಡಿ ಉಡಿ
ಮರಹು ಮೈಲಗಿಯ ಮುಟ್ಟಬ್ಯಾಡಿ
ಗುರುಸ್ಮರಣೆ ಎಂಬ ನಿಷ್ಠೆಯೊಳುಗೂಡಿ
ಪರಬ್ರಹ್ಮ ಸ್ವರೂಪವ ನೋಡಿ ||೧||
ಕಾಮಕ್ರೋಧದ ಸ್ಪರ್ಶವ ಬ್ಯಾಡಿ
ನೇಮ ನಿತ್ಯ ಇವನೇ ಮಾಡಿ
ಶಮದಮೆಂಬುದು ಕೈಗೂಡಿ
ಪ್ರೇಮಭಾವ ಭಕ್ತಿಯ ಮಾಡಿ ||೨||
ಮಿಥ್ಯಾ ಬೂಟಕಿ ಮಡಿ ಮಾಡಬೇಡಿ
ಚಿತ್ತಚಿದ್ಘನ ಸಮರಸ ನೋಡಿ
ನಿತ್ಯ ಮಹಿಪತಿಗಿದೆ ಮಡಿ ನೋಡಿ
ಸತ್ಯ ಸನಾತನ ಪದ ಕೂಡಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments