ಕಾಯೊ ಕರುಣಾನಂದ ಶ್ರೀಗುರು
(ಕೇದಾರ ರಾಗ ಝಪ್ ತಾಳ)
ಕಾಯೊ ಕರುಣಾನಂದ ಶ್ರೀಗುರು ಕಾಯೊ ಗುರು ಕೃಪಾನಿಧೆ
ಕಾಯೊ ಕರುಣಿಸಿ ಎನ್ನ ಪೂರ್ಣ ನೀ
ಕಾಯೊ ಪರಮನಿಧೆ ||ಧ್ರುವ||
ತೊಡಿಸಿ ಕರುಣಾನಂದ ಕವಚವ ಇಡಿಸೊ ಭಕುತಿವೈರಾಗ್ಯವ
ದೃಢಗೊಳಿಸು ಜ್ಞಾನಪೂರ್ಣ ನೀ ಕಡಿಸೊ ಕಾಮಕ್ರೋಧವ
ನಡೆಸಿ ನಿತ್ಯ ವಿವೇಕಪಥದಲಿ ಕೂಡಿಸೊ ನಿಜ ಸುಖಬೋಧವ
ಬಿಡಿಸೊ ಭವಭಯ ಮೂಲದಿಂದಲಿ ಬಡಿಸೊ ಹರುಷಾನಂದವ ||೧||
ಹುಟ್ಟು ಹೊಂದುವ ಬಟ್ಟೆ ಮುರಹಿಸಿ ಕೊಟ್ಟು ಕಾಯೊ ಸತ್ಸಂಗವ
ಗುಟ್ಟಿನೊಳು ನಿಜಘಟ್ಟಿಗೊಳಿಸಿ ನೀ ಮುಟ್ಟಿ ಮುದ್ರಿಸೊ ದೃಷ್ಟಾಂತವ
ನಿಟಿಲನಯನ ಭ್ರೂಮಧ್ಯದೆರೆಸಿ ನೀ ಸಟೆಯ ಮಾಡೊ ಅವಿದ್ಯವ
ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯದ ||೨||
ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ
ಕಣ್ದೆರೆಸಿ ಅಣುರೇಣುದಲಿ ಪೂರ್ಣಖೂನದೋರೋ ಸಾಕ್ಷಾತವ
ಎನ್ನೊಳಗೆ ನಿಜಾನಂದ ಸುಖದೋರಿ ಪುಣ್ಯಗೈಸೊ ನೀ ಜೀವವ
ಚಿಣ್ಣ ಕಿಂಕರ ದಾಸ ಮಹಿಪತಿ ರಕ್ಷಿಸೊ ಸಂತತವ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments