ಕೋಲು ಕೋಲೆನ್ನ ಕೋಲೆ (ದಶಾವತಾರ ಕೋಲಿನ ಪದ)

ಕೋಲು ಕೋಲೆನ್ನ ಕೋಲೆ (ದಶಾವತಾರ ಕೋಲಿನ ಪದ)

(ಮಾಂಡ್ ರಾಗ ಕೇರವಾ ತಾಳ) ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲೆ ಶ್ರೀಗುರುವಿನಾ ಬಲಗೊಂಬೆ ಕೋಲೆ ||ಪ|| ಶಿಕ್ಷಿಸಿ ನಿಗಮಗೋಚರ ರಾಕ್ಷಸನಾ ಕೊಂದು ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು ಮತ್ಸ್ಯಾವತಾರನ ಬಲಗೊಂಬೆ ಕೋಲೆ ||೧|| ಧರ್ಮ ನಡೆಯಲಾಗಿ ಮರ್ಮವ ತಾಳಿದ ಕರ್ಮಹರ ಶ್ರೀಮೂರ್ತಿಯ ಕೋಲೆ ಕರ್ಮಹರ ಶ್ರೀಮೂರ್ತಿಯು ಧರೆಯ ಪೊತ್ತ ಕೂರ್ಮಾವತಾನ ಬಲಗೊಂಬೆ ಕೋಲೆ ||೨|| ಧರೆಯ ಕದ್ದಸುರನಾ ಕೋರೆದಾಡಿಂದ ಸೀಳಿ ಹೋರಿಹೊಯಿದಾಡಿದ ನರಹರಿ ಕೋಲೆ ಹೋರಿಹೊಯಿದಾಡಿದ ನರಹರಿ ಧರೆಯಾ ಗೆದ್ದ ವರಹಾವತಾರನ ಬಲಗೊಂಬೆ ಕೋಲೆ ||೩|| ತರಳ ಪ್ರಹ್ಲಾದಗಾಗಿ ದುರುಳದೈತ್ಯನ ಕೊಂದು ಕರುಳ್ ವನಮಾಲೆಯ ಧರಿಸಿದ ಕೋಲೆ ಕರುಳ್ ವನಮಾಲೆಯ ಧರಿಸಿದಾ ಹರಿ ನರಸಿಂಹಾವತಾರನ ಬಲಗೊಂಬೆ ಕೋಲೆ ||೪|| ನೇಮಿಸಿ ಮೂರುಪಾದ ಭೂಮಿಯ ಬೇಡಿದ ಹೆಮ್ಮಿಯ ಪರಿಹರಿಸಿದ ಕೋಲೆ ಹೆಮ್ಮಿಯ ಪರಿಹರಿಸಿದ ಬ್ರಾಹ್ಮಣನಾಗಿ ವಾಮನಾವತಾರನ ಬಲಗೊಂಬೆ ಕೋಲೆ ||೫|| ಆಜ್ಞೆಯ ಮೀರಿದೆ ಅಗ್ರಜಳಾ ಶಿರ ಶೀಘ್ರದಿಂದಲಿ ಇಳುಹಿದ ಕೋಲೆ ಶೀಘ್ರದಿಂದಲಿ ಇಳುಹಿದಾ‌ಶಿರವನು ಭಾರ್ಗವರಾಮನ ಬಲಗೊಂಬೆ ಕೋಲೆ ||೬|| ಕಾಮದಿಂದೊಯ್ದ ಸೀತೆ ತಾಮಸದವನ ಕೊಂದು ನೇಮಸ್ಥಾಪಿಸಿದ ಇಳೆಯೊಳು ಕೋಲೆ ನೇಮಸ್ಥಾಪಿಸಿದ ಇಳೆಯೊಳು ಶ್ಯಾಮವರ್ಣ ರಾಮಾವತಾರನ ಬಲಗೊಂಬೆ ಕೋಲೆ ||೭|| ದುಷ್ಟ ದೈತ್ಯರನೆಲ್ಲ ಕುಟ್ಟಿ ಮಡುಹಿದ ನೆಟ್ಟನೆ ಗಿರಿಯನೆತ್ತಿದ ಕೋಲೆ ನೆಟ್ಟನೆ ಗಿರಿಯನೆತ್ತಿದ ಬೊಟ್ಟಿಲೆ ಕೃಷ್ಣಾವತಾರನ ಬಲಗೊಂಬೆ ಕೋಲೆ ||೮|| ಕದ್ದು ತ್ರಿಪುರ ಹೋಗಿ ಇದ್ದ ಸತಿಯರ ವ್ರತ ಸಿದ್ಧಿಯ ತಾನು ಅಳಿದನು ಕೋಲೆ ಸಿದ್ಧಿಯ ತಾನು ಅಳಿದನು ಬುದ್ಧಿಯಲಿ ಬೌದ್ಧಾವತಾರನ ಬಲಗೊಂಬೆ ಕೋಲೆ ||೯|| ಮಲ್ಲ ಮಾನ್ಯರನೆಲ್ಲ ಹಲ್ಲು ಮುರಿಯಲಾಗಿ ನಲ್ಲ ತೇಜಿಯನೇರಿದ ಕೋಲೆ ನಲ್ಲ ತೇಜಿಯನೇರಿದ ಬಲ್ಹ್ಯಾನಾಗಿ ಕಲ್ಕ್ಯಾವತಾರನ ಬಲಗೊಂಬೆ ಕೋಲೆ ||೧೦|| ವಸ್ತು ಪರಾತ್ಪರ ವಿಸ್ತಾರದೋರಲಾಗಿ ಹತ್ತಾವತಾರ ಧರಿಸಿದ ಕೋಲೆ ಹತ್ತಾವತಾರ ಧರಿಸಿದ ಮಹಿಪತಿ ಅಂತರಾತ್ಮನ ಬಲಗೊಂಬೆ ಕೋಲೆ ||೧೧||
ದಾಸ ಸಾಹಿತ್ಯ ಪ್ರಕಾರ
ಬರೆದವರು