ನೀನೇ ದಯಾನಿಧಿಯು ಶ್ರೀಗುರುರಾಯ

ನೀನೇ ದಯಾನಿಧಿಯು ಶ್ರೀಗುರುರಾಯ

-----ರಾಗ - ಕಲ್ಯಾಣಿ-(ಕಾಫಿ) ತೀನ್ ತಾಳ ನೀನೇ ದಯಾನಿಧಿಯು ಶ್ರೀಗುರುರಾಯ ನೀನೇ ದಯಾನಿಧಿಯು || ಧ್ರುವ || ಕರುಣದಿ ಕುಂತಿಯ ಪುತ್ರರಿಗೆ ಒಲಿದು ಕಾಳಗ ನಿರ್ಮಿಸಿ ಕೌರವರಳಿದು ಉಳಿಯದೆ ಇಳೆಯೊಳು ವಂಶವ ಸವರಿದ ಶೇಷಶಯನ ಶ್ರೀ ಕೇಶವ ನೀನೆ ||೧|| ನರಗೊಲಿದು ನರಕಾಸುರನ ಮರ್ದಿಸಿ ನಾರಗನೆಂದಜಮಿಳನ ನೀ ತಾರಿಸಿ ನಾರದಗೊಲಿದು ನಾಟ್ಯವನಾಡಿದ ನರಹರಿಯು ನಾರಾಯಣ ನೀನೆ ||೨|| ವೇದವ ಕದ್ದೊಯಿದಸುರನ ಸೀಳಿ ಮಚ್ಛವತಾರದ ರೂಪವ ತಾಳಿ ಮಾವನ ಕೊಂದ ಮಾನ್ಯರ ಮಡುಹಿದ ಮೈದುನಗೊಲಿದ ಶ್ರೀ ಮಾಧವ ನೀನೆ ||೩|| ಗೋಕುಲದಲಿ ಪುಟ್ಟಿ ಧರೆಯೊಳು ಬೆರಳಲಿ ಗೋವರ್ಧನ ಗಿರಿಯನೆತ್ತಿ ಗೋಕುಲ ಕಾಯ್ದ ಗೋಪಿಯರಿಗೊಲಿದ ಗೋಪಾಲಕೃಷ್ಣ ಗೋವಿಂದನು ನೀನೆ ||೪|| ಸೃಷ್ಟಿನೆಲ್ಲ ಬೆನ್ನಿಲಿ ತಾಳಿದ ಶೇಷನ ಸಂ- ಕಷ್ಟವ ಪರಿಹರಿಸಿದ ಶಿಷ್ಟ ವಿಭೀಷಣಗೊಲಿದು ಪಟ್ಟವಗಟ್ಟಿದ ವಿಷ್ಣುವು ನೀನೆ ||೫|| ಮದನನೊಲಿದು ಕಾಳಿಂಗನ ತುಳಿದು ಕದನದಲಿ ಬಾಣಾಸುರನಳಿದು ಮೇದಿನಿಯೊಳು ಮರೆ ಇಲ್ಲದೆ ದೈತ್ಯರ ಮರ್ದಿಸಿದ ಮಧುಸೂಧನನು ನೀನೆ ||೬|| ತ್ರಿಪುರವನಳಿದು ತ್ರಿಗುಣವ ತಾಳಿದ ತೆತ್ತೀಸಕೋಟಿ ದೇವರುಗಳಾಳಿದ ಅಕ್ರೂರಗೊಲಿದು ಚರಿತ್ರವದೋರಿದ ತ್ರಿಜಗಪತಿ ತ್ರಿವಿಕ್ರಮ ನೀನೆ ||೭|| ವಾಲಿಯನಳಿದು ವಾಲ್ಮೀಕಿಗೊಲಿದು ಬಲಿಚಕ್ರನ ಮುನಿಮುಂದಲಿ ಸುಳಿದು ಬ್ರಾಹ್ಮಣನಾಗಿ ದಾನವ ಬೇಡಿದ ಮಾನವಗೊಲಿದ ಶ್ರೀವಾಮನ ನೀನೆ ||೮|| ಸೃಷ್ಟಿನೆಲ್ಲ ನಿರ್ಮಿಸಿ ವಕ್ಷ- ಸ್ಥಳದಲಿ ಶ್ರೀಮಹಾಲಕ್ಷ್ಮಿಯ ಧರಿಸಿದ ಶ್ರೀನಿಧಿ ಶ್ರೀಪತಿ ಶ್ರೀಗುರುಮೂರುತಿ ಶ್ರೀದೇವಿಗೊಲಿದಿಹ ಶ್ರೀಧರ ನೀನೆ ||೯|| ದಸರ ಕ್ಲೇಶಕಿಲ್ಮಿಷಗಾ ತೊಳೆದು ಅಂಬರೀಷ ರುಕ್ಮಾಂಗದಗೊಲಿದು ಶುಕಶೌನಕ ಪರಾಶರ ಮುನಿಗಳಿಗೆ ಹರುಷವನಿತ್ತ ಹೃಷಿಕೇಶನು ನೀನೆ ||೧೦|| ಕ್ಷಿತಿಯೊಳು ದೃಢಪತಿವ್ರತೆಗೊಲಿದು ಯತಿಮುನಿಗಳಿಗಿನ್ನು ಗತಿಗಳನಿತ್ತು ಪತಿತರ ತಾರಿಸಿ ಪಾವನಗೈಸಿದ ಪರಂಜ್ಯೋತಿ ಪದ್ಮನಾಭನು ನೀನೆ ||೧೧|| ದೇವಕಿಗೊಲಿದು ಸ್ಥಾಪಿಸಿ ಧರೆಯೊಳು ದ್ವಾರಕಿಯಲಿ ನಿಜಲೀಲೆಯ ತೋರಿದ ದಾರಿದ್ರ್ಯಭಂಜನ ದುರಿತವಿಧ್ವಂಸನ ದೇವಕಿಪುತ್ರ ದಾಮೋದರ ನೀನೆ ||೧೨|| ಸಿದ್ಧಶರಣರಿಗೊಲಿದು ಸದ್ಗತಿ ಸುಖಸಾಧನ ಸಹದೇವಗೆ ತೋರಿದ ಸಂಭರಮದಿ ಸುಧಾಮಗ ಒಲಿದು ಸಂತೋಷವನಿತ್ತ ಸಂಕರುಷಣ ನೀನೆ ||೧೩|| ವಸುಧಿಯೊಳು ಭಸ್ಮಾಸುರನ ಮರ್ದಿಸಿ ಭಾಷೆಯನಿತ್ತು ಭಕ್ತರ ಪಾಲಿಸಿ ಋಷಿ ವೇದವ್ಯಾಸಗೊಲಿದಾತನು ವಸುದೇವಸುತ ವಾಸುದೇವನು ನೀನೆ ||೧೪|| ವಿದುರ ಉದ್ಧವ ಗರುಡಗೊಲಿದು ಭೃಗುಮುನಿ ಕಪಿಲ ಯೋಗೇಂದ್ರನ ಸಲುಹಿದ ಸ್ಥಿರಪದವಿತ್ತನೇಕ ಮಂದಿಗೆ ಪ್ರಸನ್ನನಾದ ಪ್ರದ್ಯುಮ್ನನು ನೀನೆ ||೧೫|| ಸೀತಾ ಸುದ್ದಿಯ ತಂದವಗೊಲಿದು ಹತ್ತುತಲೆಗಳ ಇದ್ದವನಳಿದು ಕದ್ದು ಬೆಣ್ಣೆಯ ಮುದ್ದೆಯ ಮೆದ್ದು ಉದ್ಧವಗೊಲಿದ ಅನಿರುದ್ಧನು ನೀನೆ ||೧೬|| ಸೋಕಿಸಿ ಪೂತನಿಯ ಪ್ರಾಣವ ಹೀರಿದ ಭಕ್ತ ಪುಂಡಲೀಕನ ಸಲಹಿದ ಭಕ್ತಿಗೆ ಒಲಿದು ಮುಕ್ತಿಯನಿತ್ತ ಪರಮಪುರುಷ ಪುರುಷೋತ್ತಮನು ನೀನೆ ||೧೭|| ಅಕ್ಷಯವೆಂದು ರಕ್ಷಿಸಿ ಸಭೆಯೊಳು ದ್ರೌಪದಿ ಕರುಣಾಕಟಾಕ್ಷದಿ ಸಲಹಿದ ಭಕ್ತವತ್ಸಲನಾಗಿ ಗಜೇಂದ್ರಗೆ ಮೋಕ್ಷವನಿತ್ತ ಅಧೋಕ್ಷಜ ನೀನೆ ||೧೮|| ನರನಾರಿಯು ನಟೇಶ್ವರನಾಗಿ ನಖಮುಖದಲಿ ಹಿರಣ್ಯಕನ ಸೀಳಿ ಭಕ್ತಪ್ರಹ್ಲಾದಗೆ ಒಲಿದು ಸ್ತಂಭದಿ ಪ್ರಕಟಿಸಿದ ನರಸಿಂಹನು ನೀನೆ ||೧೯|| ಅನಿಲ ಸ್ನೇಹಿತ ಅಜಸುತಾಗ್ನಿಗೆ ಒಲಿದು ಅಹಲ್ಯಾಶಾಪ ವಿಮೋಚನ ಮಾಡಿದ ನೆಚ್ಚಿದ ಧ್ರುವನ ನಿಜಭಕ್ತಿಗೆ ಒಲಿದು ಅಚಲ ಪದವಿತ್ತಚ್ಯುತ ನೀನೆ ||೨೦|| ಜತದೊಳು ಭಕ್ತಜನರಿಗೆ ಒಲಿದು ಜಾಹ್ನವಿ ನಿರ್ಮಿಸಿ ಜನಕನ ಸಲಹಿದ ಸಾಧು ಸಜ್ಜನ ಮುನಿ ಸಂಜೀವನ ಜಾನಕೀಪತಿ ಜನಾರ್ಧನನು ನೀನೆ ||೨೧|| ಅಂಗದಗೊಲಿದಾನಂದವನಿತ್ತು ಕುಂದದೆ ಕರೆದುಪಮನ್ಯನ ಸಲಹಿದ ದಿನಕರ ಚಂದ್ರ ಕಳಿಯಗಳಿತ್ತು ಇಂದ್ರಗೆ ಒಲಿದ ಉಪೇಂದ್ರನು ನೀನೆ ||೨೨|| ಹಯವದನನವತಾರವ ಧರಿಸಿ ಧರೆಯೊಳು ಭಕ್ತನ ಜನ್ಮವ ಹರಿಸಿ ಹರಿಶ್ಚಂದ್ರನ ಕ್ಲೇಶವ ಪರಿಹರಿಸಿದ ಸುರಮುನಿಗೊಲಿದ ಶ್ರೀಹರಿಯು ನೀನೆ ||೨೩|| ಕಾಲಿ ಮಥನವ ಮಾಡಿ ಕರುಣದಿ ಸುರರಿಗೆ ಅಮೃತವನಿತ್ತು ಸಲಹಿದ ಕಲ್ಕ್ಯಾವತಾರದ ಲೀಲೆಯ ತೋರಿದ ಕಪಟನಾಟಕ ಶ್ರೀಕೃಷ್ಣನು ನೀನೆ ||೨೪|| ಸಂಧ್ಯಾನದ ಸಾರಾಯವನಿತ್ತು ಕಾಯದಿ ಸದ್ಗತಿ ಸಾಧನದೋರಿದ ನರಕೀಟಕ ಮಹಿಪತಿ ತಾರಕ ಗುರುಮೂರ್ತಿಯು ಪರಮ ದಯಾನಿಧಿಯು ನೀನೆ ||೨೫||
ದಾಸ ಸಾಹಿತ್ಯ ಪ್ರಕಾರ
ಬರೆದವರು