ದತ್ತ ದತ್ತೆನಲು ಹತ್ತಿ ತಾ ಬಹನು

ದತ್ತ ದತ್ತೆನಲು ಹತ್ತಿ ತಾ ಬಹನು

( ಮಾಂಡ್ ರಾಗ ಕೇರವಾ ತಾಳ) ದತ್ತ ದತ್ತೆನಲು ಹತ್ತಿ ತಾ ಬಹನು ಚಿತ್ತದೊಳಗಾಗುವ ಮತ್ತೆ ತಾ ಶಾಶ್ವತನು ದತ್ತ ಉಳ್ಳವನ ಹತ್ತಿಲೇ ಇಹನು ವೃತ್ತಿ ಒಂದಾದರೆ ಹಸ್ತಗು(ಗೂ?)ಡುವನು ||೧|| ಎತ್ತ ನೋಡಿದರೆ ಮೊತ್ತವಾಗಿಹ ತಾಂ ಉತ್ತಮೋತ್ತಮರನೆತ್ತುವ ತಾಯಿ ತಾ ಅತ್ತಲಿತ್ತಾಗದೆ ಹತ್ತಿಲೆ ಸೂಸುತ ಮುತ್ತಿನಂತಹನು ನೆತ್ತಿಲಿ ಭಾಸುತ ||೨|| ದತ್ತನೆಂದೆನಲು ಕತ್ತಲೆ ಪೋಗುದು ಮೃತ್ಯು ಅಂಜುತಲಿ ಭೃತ್ಯನಾಗಿಹುದು ದತ್ತನಿಂದಧಿಕ ಮತ್ತು ತಾ ಒಂದು ಉತ್ತಮರಿಗೆ ತಾ ಸತ್ಯ ಭಾಸುದು ||೩|| ಒತ್ತಿ ಉನ್ಮನಿಯಾವಸ್ಥಿಯೊಳಾಡುವುದು ಸ್ವಸ್ತಮನಾದರೆ ವಸ್ತು ಕೈಗೂಡುವದು ಬಿತ್ತಿ ಮನ ಗುರುಭಕ್ತಿ ಮಾಡುವುದು ದತ್ತ ತನ್ನೊಳು ತಾನೆವೆ ಭಾಸುವುದು ||೪|| ದತ್ತ ದತ್ತೆಂದು ತಾ ಅರ್ತ ಮಹಿಪತಿಯ ಬೆರ್ತ ನೋಡಿದ ಮನವು ಸುಮೂರ್ತಿಯು ಮರ್ತ್ಯದೊಳಿದುವೆ ಸುಖ ವಿಶ್ರಾಂತಿಯು ಮರ್ತು ಹೋಗುವುದು ಮಾಯದ ಭ್ರಾಂತಿಯು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು