ಗುರು ನಾಮ ಸ್ಮರಿಸಿರೊ ಶ್ರೀಗುರುನಾಮ

ಗುರು ನಾಮ ಸ್ಮರಿಸಿರೊ ಶ್ರೀಗುರುನಾಮ

( ರಾಗ ತೋಡಿ , ದೀಪಚಂದಿ ತಾಳ) ಗುರು ನಾಮ ಸ್ಮರಿಸಿರೊ ಶ್ರೀಗುರುನಾಮ ಸುರಮುನಿ ಜನರ ಪ್ರಿಯವಾದ ನಾಮ ||ಪ|| ಬ್ರಹ್ಮವಿಷ್ಣುರುದ್ರರಿಗಿದೇ ನಿಜನಾಮ ಪ್ರೇಮದಿಂದ ಸ್ಮರಿಸುವುದು ಇದೇ ನಾಮ ಸಮಸ್ತ ಲೋಕಕ್ಕೆ ಸಾರವಾದ ನಾಮ ನೇಮದಿಂದ ತಾರಿಸುವ ದಿವ್ಯನಾಮ ||೧|| ಸಕಲಾಗಮ ಪೂಜಿತಕಿದೇ ನಾಮ ಏಕೋಮಯವಾಗಿ ತೋರುವದಿದೇ ನಾಮ ಶುಕನಾಮ ದೇವರಿಗಿದೇ ನಿಜನಾಮ ಸುಖ ಸರ್ವರಿಗೆ ತೋರುವ ಗುರುನಾಮ ||೨|| ಕರ್ಮಬಂಧನ ಛೇದಿಸುವದಿದೇ ನಾಮ ಕರ್ಮದೋರಿ ಕೊಡುವುದು ಗುರುನಾಮ ಬ್ರಹ್ಮಾನಂದ ಸುಖದೋರುವಾನಂದ ನಾಮ ಧರ್ಮ ಜಾಗಿಸಿ ಕೊಡುವುದೀ ಗುರುನಾಮ ||೩|| ಅಜಮಿಳಗ ತಾರಿಸಿದುದೀ ನಾಮ ಗಜಭಯ ಪರಿಹರಿಸಿದಿದೇ ನಾಮ ಸುಜನರಿಗೆ ಪ್ರಸನ್ನವಾದ ನಾಮ ಮೂಜಗಕೆ ತಾ ಮುಖ್ಯವಾದ ಗುರುನಾಮ ||೪|| ಅಹಲ್ಯ ಉದ್ಧರಣ ಮಾಡಿದುದಿದೇ ನಾಮ ಪ್ರಹ್ಲಾದನ ಪ್ರಾಣ ಕಾಯ್ದಿದೇ ನಾಮ ಫಲುಗುಣಗ ತಾ ಪಕ್ಷವಾದುದಿದೇ ನಾಮ ಒಲಿದು ಧ್ರುವಗ ಢಳವಿತ್ತ ಗುರುನಾಮ ||೫|| ಅಗಣಿತ ಗುಣ ಪರಿಪೂರ್ಣವಾದ ನಾಮ ಸುಗಮ ಸುಪಥಸಾಧನ ಇದೇ ನಾಮ ಯೋಗಿಜನ ಸೇವಿಸುವ ನಿಜನಾಮ ನಿರ್ಗುಣಾನಂದವಾಗಿಹ ಗುರುನಾಮ ||೬|| ಸೂರ್ಯಚಂದ್ರ ಸಮಸ್ತವಂದ್ಯ ಇದೇ ನಾಮ ಕಾರ್ಯಕಾರಣವಾಗಿಹ ಇದೇ ನಾಮ ತೂರ್ಯಾವಸ್ಥೆಯೊಳಗೆ ಸೂರಿಗೊಂಬೋ ನಾಮ ತರಳ ಮಹಿಪತಿ ತಾರಕ ಗುರುನಾಮ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು