ನಿಮ್ಮಿಂದ ಗುರು ಪರಮಕಲ್ಯಾಣವು
(ರಾಗ - ಬಹುಳಿ (ಶಂಕರಾ) ಝಪ್ ತಾಳ)
ನಿಮ್ಮಿಂದ ಗುರು ಪರಮಕಲ್ಯಾಣವು
ನಿಮ್ಮಿಂದಲೆನಗೆ ಘನ ಪರಿಪೂರ್ಣವು||ಪ||
ಹುರಿದು ಭವಬೀಜ ಧರೆಯೊಳು ದಯ ಕರುಣದಲಿ
ಪರಮ ಆನಂದ ಸುಖ ಮಳೆಯಗರೆದು
ಕರ್ಮಪಾಶಗಳೆಂಬ ಕರಿಕಿಬೇರನು ಕಿತ್ತಿ
ಹರಗಿ ಬಿತ್ತಲು ನಾಮ ತಾರಕುಪದೇಶದಲಿ ||೧||
ವರ ಪ್ರತಾಪದ ಬೆಳೆಯು ತುಂಬಿ ತುಳುಕುವ ಸಿರಿಯು
ಸರ್ವಮಯವೆಂಬ ತೆನೆಗಳು ತುಂಬಿ
ಏರಿ ಸುಷುಮ್ನ ನಾಳದ ಮಂಚಿಕೆಯ ಮೆಟ್ಟಿ
ಪರಿಪರಿ ಅವಸ್ಥೆ ಹಕ್ಕಿಗಳ ಹಾರಿಸಲಾಗಿ ||೨||
ಮುರಿದು ಭೇದಾಬೇದವೆಂಬ ಗೂಡಲೊಟ್ಟಿ
ಅರಿವು ಕಣದಲ್ಲಿ ತರತರದಲಿಕ್ಕಿ
ಜ್ಞಾನವೈರಾಗ್ಯವೆಂಬೆರಡು ಎತ್ತುಗಳ ಹೂಡಿ
ಸರ್ವಗುಣ ತೆನೆ ತೆಗೆದು ತುಳಿದು ರಾಶಿ ಮಾಡಿಸಲಾಗಿ ||೩||
ಸರ್ವಮಯವೆಂಬ ರಾಶಿಯು ಒಬ್ಬುಳಿಯ ಮಾಡಿ
ತೂರಿ ತರ್ಕ ಭಾಸಗಳೆದು
ಮಿಥ್ಯಾ ಪ್ರಪಂಚವೆಂಬ ಕಾಳನು ಕಡೆಮಾಡಿ
ಸಫಲ ಸಹಕಾರದಲಿ ಸುಗ್ಗಿ ಮಾಡಿಸಲಾಗಿ ||೪||
ಏಕೋಬ್ರಹ್ಮದ ಗತಿ ನಿಧಾನ ರಾಶಿಯು ದೋರಿ
ಜನ್ಮ ಮರಣದ ಕೊಯಿಲಿಯ ಸುಟ್ಟು ಉರುಹಿ
ಸದ್ಗತಿ ಮುಕ್ತಿ ಸುಕಾಲ ಸಾಧನವಿತ್ತು
ಮೂಢಮಹಿಪತಿ ಪ್ರಾಣ ಸದ್ಗೈಸಲಾಗಿನ್ನು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments