ಇಂದು ಶ್ರೀಗುರುಪಾದಪದ್ಮ ನೋಡುವ

ಇಂದು ಶ್ರೀಗುರುಪಾದಪದ್ಮ ನೋಡುವ

(ರಾಗ - ವರಾಳಿ ( ಬಹಾರ್ ) ತೀನ್ ತಾಳ) ಇಂದು ಶ್ರೀಗುರುಪಾದಪದ್ಮ ನೋಡುವ ಎಂದೆಂದು ಬಿಡದೆ ಭಕ್ತಿಭಾವ ಮಾಡುವ ||ಪ|| ಮನವೆಂಬ ಮಂಟಪವನಾಡುವ ನೆನವು ನವರತ್ನದ ಸಿಂಹಾಸನಿಡುವ ಜ್ಞಾನಧ್ಯಾನದೆಡಬಲದಿ ಪಿಡಿವ ಅನುವಾಗಿ ಅನಿಮಿಷದಲಿ ನೋಡುವ ||೧|| ತನುವೆಂಬ ತಾರತಮ್ಯಭಾವ ಮಾಡುವ ಅನುಭವದಿಂದನುಪಮನ ನೋಡುವ ಆನಂದವೆಂಬ ಅಭಿಷೇಕವ ಮಾಡುವ ಮನೋ ಅಭೀಷ್ಟೆಯ ಸುವಸ್ತ್ರ ನೀಡುವ ||೨|| ಬುದ್ಧಿಭಾವನೆಯ ಗಂಧಾಕ್ಷತೆ ಇಡುವ ಶುದ್ಧ ಸುವಾಸನೆ ಪರಿಮಳ ಮಾಡುವ ಶಬ್ದ ಸುವಾಕ್ಯದ ಪುಷ್ಪವ ನೀಡುವ ಸಿದ್ಧಾಂತವೆಂಬುವ ಸುಸೇವೆ ಮಾಡುವ ||೩|| ಪ್ರಾಣಪಂಚದಾ ಪಾದಪೂಜೆಯ ಮಾಡುವ ಪುಣ್ಯ ಪೂರ್ವಾರ್ಜಿತ ಫಲಗಳಿಡುವ ಅನೇಕವಾದ ಪರಿಪೂಜೆ ಮಾಡುವ ಧನ್ಯಧನ್ಯವಾಗುವ ಮುಕ್ತಿ ಬೇಡುವ ||೪|| ನಿರ್ವಿಕಲ್ಪ ನಿಜಮೂರುತಿ ನೋಡುವ ಪೂರ್ವಕರ್ಮವೆಂಬ ಧೂಪಾರ್ತಿ ಮಾಡುವ ಅರುವೆಂಬ ದೀಪದಿ ಏಕಾರ್ತಿ ಮಾಡುವ ಸರ್ವಕಾಲದಲಿ ಸಂತೋಷಬಡುವ ||೫|| ಜೀವಭಾವವೆಂಬ ನೈವೇದ್ಯವಿಡುವ ವಿವೇಕುದಕ ಸಮರ್ಪಣೆ ಮಾಡುವ ತ್ರಿವಿಧ ಗುಣವೆಂಬ ತಾಂಬೂಲ ನೀಡುವ ಆವಾವ ಪರಿಯ ಪ್ರಾರ್ಥನೆ ಮಾಡುವ ||೬|| ಪಂಚತತ್ವದ ಪಂಚಾರತಿ ಮಾಡುವ ಚಂಚಲವಿಲ್ಲದೆ ಚಿದ್ಘನ ನೋಡುವ ಪಂಚಭೂತವೆಂಬ ಆರತಿ ಮಾಡುವ ಸಂಚಿತಕ್ರಿಯ ಮಂತ್ರಪುಷ್ಪ ನೀಡುವ ||೭|| ದಿವ್ಯಯೋಗ ಭೋಗ ಚೌರ ಢಾಳಿಸುವ ಅವಲೋಕನೆಯ ಬೀಸಣಿಕೆ ಬೀಸುವ ಕಾವ ಕರುಣನ ಪಾದ ನಮಿಸುವ ಭವಬಂಧನದ ಮೂಲ ಛೇದಿಸುವ ||೮|| ನಮ್ರತೆಯೆಂಬ ನಮಸ್ಕಾರ ಮಾಡುವ ಸಂಭ್ರಮದಿಂದ ಸ್ವಸ್ವರೂಪ ನೋಡುವ ಪ್ರೇಮಪ್ರೀತೆಂಬ ಪ್ರದಕ್ಷಿಣೆ ಮಾಡುವ ಜನ್ಮ ಮರಣದ ಹಾದಿಯ ಬಿಡುವ ||೯|| ನಿರ್ಗುಣಾನಂದ ಸ್ವರೂಪ ನೋಡುವ ನಿಗಮಗೋಚರನೆಂದು ಸ್ತುತಿಪಾಡುವ ಅಗಣಿತಗುಣ ಸುಕೀರ್ತಿ ಸೂರ್ಯಾಡುವ ಜಗದೊಳಾನಂದದಿಂದ ನಲಿದಾಡುವ ||೧೦|| ಅನಾಹತವೆಂಬ ಧ್ವನಿವಾದ್ಯ ಮಾಡುವ ಆನಂದಬ್ರಹ್ಮದೊಳು ಮುಳುಗ್ಯಾಡುವ ಭಾನುಕೋಟಿ ತೇಜಪ್ರಕಾಶ ನೋಡುವ ದೀನ ಮಹೀಪತಿ ಸ್ವಾಮೆಂದು ಕೊಂಡಾಡುವ ||೧೧||
ದಾಸ ಸಾಹಿತ್ಯ ಪ್ರಕಾರ
ಬರೆದವರು