ಬಂಧನವ ಪರಿಹರಿಸು ಭಯವಿದೂರ
------ರಾಗ -ಕಾಂಬೋಧಿ ಝಂಪೆತಾಳ
ಬಂಧನವ ಪರಿಹರಿಸು ಭಯವಿದೂರ
ಕಂದರ್ಪಜನಕ ಕಾರುಣ್ಯದಲಿ ಭಕ್ತಜನ ||ಪ||
ದುಷ್ಟಜನರು ಬಲು ಕಷ್ಟಪಡಿಸುವರು
ನಿನಗೆಷ್ಟು ಉಸುರಲಿ ಕೇಳು ಜಿಷ್ಣುಸಖನೇ
ವೃಷ್ಣೀಶ ನೀ ದಯಾದೃಷ್ಟಿಯಿಂದಲಿ ಈಗ
ಹೃಷ್ಟನ್ನ ಮಾಡು ಸಂತುಷ್ಟಿಯಲಿ ಬೇಗ ||೧||
ಹಯಮುಖನೆ ನಿನ್ನವರ ದಯದಿಂದ ಸಲಹುವದು
ವಯನಗಮ್ಯನೆ ಜ್ಞಾನತ್ರಯವ ನಿರುತ
ಪ್ರಿಯನೆಂದು ನಿನಗೆ ನಾ ದೈನ್ಯದಿಂದಲಿ ಮೊರೆ ಇಡುವೆ
ದಯಮಾಡುವದು ನೀನು ಜಯಪ್ರದಾಯಕನಾಗಿ ||೨||
ವೀತಶೋಕನೆ ಎನ್ನ ಮಾತು ಲಾಲಿಸಿ ನಿನ್ನ
ದೂತನ್ನ ಸಲಹುವದು ಪ್ರೀತಿಯಿಂದ
ದಾತ ಶ್ರೀಗುರು ಜಗನ್ನಾಥವಿಠಲ ನಿನ್ನ ನಾ
ತುತಿಸಬಲ್ಲೆನೆ ವಿಧಾತೃಮಖವಂದಿತನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments