ಪಿಡಿಯೆನ್ನ ಕೈಯ್ಯ ರಂಗಯ್ಯ
----ರಾಗ ಮಧ್ಯಮಾವತಿ (ಭೂಪ) ಅಟತಾಳ(ದೀಪಚಂದಿ)
ಪಿಡಿಯೆನ್ನ ಕೈಯ್ಯ ರಂಗಯ್ಯ ||ಪ||
ಪಿಡಿಯೆನ್ನ ಕೈಯ್ಯ ಪಾಲ್ಗಡಲೊಡೆಯನೆ ಮೋಹ-
ಮಡುವಿನೊಳ್ಬಿದ್ದು ಬಾಯ್ಬಿಡುವೆ, ಬೇಗನೆ ಬಂದು ||ಅ.ಪ||
ನೀರಜನಾಭ ನಂಬಿದೆ ನಿನ್ನ ನೀರಪ್ರದಾಭಾ
ಕಾರುಣ್ಯನಿಧಿ ಲಕ್ಷ್ಮೀನಾರಸಿಂಹನೆ ಪರಿ-
ವಾರ ಸಹಿತ ಈ ಶರೀರದೊಳಡಗಿದ್ದು
ಘೋರತರ ಸಂಸಾರ ಪಂಕದಿ
ಚಾರಿವರಿದೆನೊ ದೂರನೋಳ್ಪರೆ
ಹೇ ರಮಾಪತೆ ಗಾರುಮಾಡದೆ
ಚಾರುವಿಮಲ ಕರಾರವಿಂದದಿ ||೧||
ಅನಿಮಿತ್ತ ಬಂಧು ನೀನೇ ಗತಿ ಗುಣಗಣಸಿಂಧು
ಅನಘನೆ ಸೇವಿಸುವೆನೊ ವಿಧಿಭವಸಕ್ರಂ-
ದನ ಮುಖ್ಯದೇವ ಸನ್ಮುನಿಗಣಾರ್ಚಿತ ಪಾದ
ಅನುಜ ತನುಜಾಗ್ರಜ ಸದಾಣುಗ
ಜನನಿ ಜನಕ ಪಶು ಕೃಷೀ ಧನ
ಘನಸದನ ಸಂಹನನ ಮೊದಲಾ-
ದಿನಿತು ಸಾಕುವ ಘನತೆ ನಿನ್ನದು ||೨||
ಶ್ರೀ ಜಗನ್ನಾಥವಿಠಲ ದ್ವಿಜರಾಜವರೂಥ
ಓಜ ಕಾಮಿತಕಲ್ಪ ಭೂಜ ಭಾಸ್ಕರಕೋಟಿ
ತೇಜ ಮನ್ಮನದಿ ವಿರಾಜಿಸು ಪ್ರತಿದಿನ
ಈ ಜಗತ್ರಯ ಭಾಜನನೆ ಬಲು
ಸೋಜಿಗವಲಾ ನೈಜನೆ ನಿ-
ರ್ವ್ಯಾಜ್ಯದಿಂ ನೀನೆ ಜಯಪ್ರದ
ನೈಜ ಜನರಿಗೆ ಹೇ ಜಗತ್ಪತೇ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments