ಇದು ನಿನಗೆ ಧರ್ಮವೆ ಇಂದಿರೇಶ

ಇದು ನಿನಗೆ ಧರ್ಮವೆ ಇಂದಿರೇಶ

----ರಾಗ ಕಾಂಬೋಧಿ (ಸಾರಂಗ) ಝಂಪೆತಾಳ ಇದು ನಿನಗೆ ಧರ್ಮವೆ ಇಂದಿರೇಶ ||ಪ|| ಬದಿಗ ನೀನಾಗಿದ್ದು ಭೀತಿಪಡಿಸುವುದು ||ಅ.ಪ|| ನಿನ್ನ ಗುಣಗಳ ತುತಿಸಿ ನಿನ್ನದೇ ಹಾರೈಸಿ ನಿನ್ನವರ ಪ್ರೀತಿಯನು ಸಂಪಾದಿಸಿ ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ ಮಾನವನ ಈ ಪರಿಯ ಬನ್ನಬಡಿಸುವದು ||೧|| ದುರುಳನಲ್ಲವೊ ನಿನ್ನ ಚರಣ ಸೇವಕರವನೊ ಪರಿಪಾಲಿಪುದು ನಿನಗೆ ಪರಮಧರ್ಮ ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ ಶರಣಪಾಲಕನೆಂಬ ಬಿರುದು ಸುಳ್ಳಾಗುತಿದೆ ||೨|| ಶೋಕನಾಶಕ ವಿಗತಶೋಕನೆಂಬೋ ನಾಮ ನಾ ಕೇಳಿ ಮೊರೆಹೊಕ್ಕೆ ಲೋಕಬಂಧು ನಿರಾಕರಿಸದೆಮ್ಮನು ಸಾಕಬೇಕನುದಿನವು ವಾಕು ಮನ್ನಿಪುದು ಲೋಕೈಕ ರಕ್ಷಾಮಣಿ||೩|| ಗುಣವೆ ನಿನಗಿದು ಬರಿದೆ ದಣಿಸುವುದು ಶರಣರನು ಪ್ರಣತಾರ್ತಿಹರ ವಿಭೀಷಣ ಪಾಲಕ ಕ್ಷಣಕನಂತಪರಾಧ ಎಣಿಸುವಡೆ ಕಡೆವುಂಟೆ ಮಣಿದು ಬಿನ್ನಹ ಮಾಳ್ಪೆ ದನುಜದಲ್ಲಣನೆ ||೪|| ನಮೋ ನಮೋ ಬ್ರಹ್ಮಣ್ಯದೇವ ದೇವರ ದೇವ ನಮೋ ನಮೋ ಧನ್ವಂತ್ರಿ ದುರಿತ ಹಂತ್ರಿ ನಮೋ ನಮೋ ಕಾರುಣ್ಯಶೀಲ ಸಜ್ಜನಪಾಲ ನಮೋ ನಮೋ ಜಗನ್ನಾಥವಿಠಲ ವಿಖ್ಯಾತ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು