ಭಾರತೀ ಮಜ್ಜನನೀ
ರಾಗ-ಶಂಕರಾಭರಣ (ಭೈರವಿ) ಅಟತಾಳ (ದಾದರಾ)
ಭಾರತೀ ಮಜ್ಜನನೀ ಭಾರತೀ- ||ಪ||
ಭಾರತೀ ಭರತನರ್ಧಾಂಗಿ ಕರು-
ಣಾರಸಪೂರಿತ ಪಾಂಗಿ ಆಹಾ
ತಾರ್ಕ್ಷ್ಯ ಪ್ರಮುಖ ವೈಕಾರಿಕ ದೇವ ಗ-
ಣಾರಾಧಿತಾಂಘ್ರಿ ಸರೋರುಹೆ ಪಾಲಿಸು ||ಅ.ಪ||
ವಿದ್ಯುನ್ನಾಮಕೆ ವಿಧಿಜಾತೆ ಕೃತಿ
ಪ್ರದ್ಯುಮ್ನ ಜಠರಸಂಭೂತೆ ಅನ-
ವದ್ಯ ಸದ್ಗುಣ ಗಣವ್ರಾತೆ ಬ್ರಹ್ಮ-
ವಿದ್ಯವ ಪಾಲಿಸು ಮಾತೆ ಆಹಾ
ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ಪೆತ್ತ
ಶೃದ್ಧಾನಾಮಕೆ ಅನಿರುದ್ಧನ ತೋರಿಸೆ ||೧||
ಕಾಳಿ ದ್ರೌಪದಿ ಶಿವಕನ್ಯಾ ಮನ್ಮ-
ನಾಲಯದಲ್ಲಿ ನಿಲ್ಲೆ ಘನ್ನ ಪ್ರಾಜ್ಞ
ಮೌಳಿಮಣಿಯೆ ನಿತ್ಯ ಎನ್ನ ಪರಿ-
ಪಾಲಿಸೆ ನಂಬಿದೆ ನಿನ್ನ ಆಹಾ
ಶೈಲಜಾ ಶ್ಯಾಮಲ ಪೌಲೋಮಿ ಉಷೇರಿಂದ
ವಾಲಗ ಕೈಕೊಂಬ ಕಾಲಾಭಿಮಾನಿಯೆ ||೨||
ವಂದಿಪೆ ನಿನಗೀಂದ್ರ ಸೇನಾ ನಳ
ನಂದಿನಿ ಕರುಣಿಸು ಜ್ಞಾನ ಶ್ರೀ ಮು-
ಕುಂದನ ಪರಮಕಲ್ಯಾಣಿ ಗುಣ
ಸಿಂಧುವಿನೊಳಗೆ ಪೀಠಿಣಿ ಆಹಾ
ದ್ವಂದ್ವದಿ ಚರಿಸುವ ಗಂಧವಾಹನ ರಾಣಿ
ಸಿಂಧೂರಗಮನೆ ಪುರಂದರಾರಾಧಿತೆ ||೩||
ಗುಣತ್ರಯತ್ಮಕವಾದ ಲಿಂಗದೊಳು
ಅಣಿರೂಪಳಾಗಿ ತುರಂಗ ಮುಖ
ಅನಿಲಾಂತರ್ಗತ ಪಾಂಡುರಂಗನಂಘ್ರಿ
ವನಜಯುಗಲ ಮತ್ತಭೃಂಗ ಆಹಾ
ಎನಿಸಿ ತತ್ವಕಾರ್ಯ ಅನಿರುದ್ಧ ದೇಹಸ್ಥ
ಅನಿಮಿಷರೊಳು ಪೊಕ್ಕು ದ್ವಿನವರೂಪದಿ ಮಾಳ್ಪೆ ||೪||
ನಿಗಮತತಿಗಳಭಿಮಾನಿ ನಿನ್ನ
ಪೊಗಳಲೆನ್ನೊಶವೆ ಕಲ್ಯಾಣಿ ಆ ಪ-
ನ್ನಗರಾಜ ಸಾಹಸ್ರವಾಣಿಯಿಂದ
ಬಗೆಬಗೆ ತುತಿಪ ಸುಶ್ರೋಣಿ ಆಹಾ
ಮುಗಿವೆ ಕರಗಳೆನ್ನವಗುಣವನೆಣಿಸದೆ
ಜಗನ್ನಾಥವಿಠಲನಂಘ್ರಿಗಳ ಧ್ಯಾನವೀಯೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments