ಇದನೆ ಪಾಲಿಸು
ರಾಗ - ಕಾಂಬೋಧಿ - ಕೀರ್ವಾಣಿ (ಮಾಲಕಂಸ್) ಝಂಪೆತಾಳ
ಕೃತಿಕಾರರು- ಜಗನ್ನಾಥದಾಸರು
ಇದನೆ ಪಾಲಿಸು ಜನ್ಮಜನ್ಮಗಳಲಿ
ಮಧುಸೂದನನನೆ ನಿನ್ನ ಸ್ಮರಣೆ ದಾಸರ ಸಂಗ ||ಪ||
ಪುಣ್ಯ-ಪಾಪ ಜಯಾಜಯ ಕೀರ್ತಿ ಅಪಕೀರ್ತಿ
ಮನ್ಯು ಮೋಹಾಸಕ್ತಿ ಕಾಮಲೋಭಾ
ನಿನ್ನಧೀನವು ಎನ್ನದಲ್ಲವೆಂದಿಗು ಪ್ರಕೃತಿ-
ಜನ್ಯಗುಣ ಕಾರ್ಯವೆಂಬ ಜ್ಞಾನವೇ ಸತತ ||೧||
ಗುಣಕರ್ಮಕಾಲಗಳ ಮನೆಮಾಡಿ ಜೀವರಿಗೆ
ಉಣಿಸುತಿಹೆ ಸುಖದುಃಖ ಘನಮಹಿಮನೆ
ಗುಣಗಳಭಿಮಾನಿ ಶ್ರೀವನಿತಾರಮಣ ಪ್ರಯೋ-
ಜನವಿಲ್ಲದಲೆ ಮಾಡಿ ಜನರ ಮೋಹಿಸೆಯೆಂಬ ||೨||
ಈಶ ನೀನಾದ ಕಾರಣದಿಂದ ಸುಖದುಃಖ
ಲೇಶವಿಲ್ಲವು ಸರ್ವಕಾಲಗಳಲಿ
ಕೇಶವಜಗನ್ನಾಥವಿಥಲನೆ ಭಕ್ತರ ಪ್ರ-
ಯಾಸವಿಲ್ಲದೆ ಕಾದಿಯೆಂಬಾ ಸ್ಮರಣೆಯ ನಿರುತ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments