ಏಳಯ್ಯ ಬೆಳಗಾಯಿತು

ಏಳಯ್ಯ ಬೆಳಗಾಯಿತು

(ರಾಗ ಭೂಪಾಳಿ ಝಂಪೆತಾಳ) ಏಳಯ್ಯ ಬೆಳಗಾಯಿತು ||ಪ|| ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆ ಸುಳಿವು ದೊರೆಯೆ ನಿಮ್ಮ ಹಾರಯ್ಸಿ ನಿಂದಾರೆ ತಡವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯ ಸೆಳೆಮಂಚದಿಂದ ಏಳೊ || ವೇದವನು ತರಲೇಳು ಮಂದರವ ಪೊರಲೇಳು ಭೇದಿಸುತ ಅಸುರರನು ದಾಡೆಯಿಂ ತರಲೇಳು ಕಾದಿ ಹಿರಣ್ಯಕನ ಕರುಳು ಕೊರಳೊಳಗೆ ಧರಿಸೇಳು ಕಾಯ್ದು ಬಲಿ ಬಾಗಿಲದೊಳು || ಭೇದಿಸಿ ಭೂಮಿ ತ್ರಿಪಾದದಿಂದಳೆಬೇಕು ಛೇದಿಸಿ ಕ್ಷತ್ರಿಯರ ಕೊದಲಿಂದ ಕಡಿಯೇಳು ಸಾಧಿಸಿ ಶರಧಿಯಲಿ ಸೇತುವೆಯ ಕಟ್ಟೇಳು ನಂದಗೋಪನ ಉದರದಿ || ಪುರಮೂರು ಗೆಲ್ಲಬೇಕು ಅರಿವೆಯನೆ ಕಳೆಯೇಳು ದುರುಳನ ಕೊಲ್ಲಬೇಕು ತುರಗವಾಹನನಾಗು ಪರಿಪರಿಯ ಕೆಲಸಗಳನು ಮಾಡಲುದ್ಯೋಗಿಸಿ ಮರೆತು ನಿದ್ರೆಯ ಗೆಯ್ವರೆ || ಆಲದೆಲೆಯಿಂದೇಳು ಮಹಲಕುಮಿ ಬಂದಾಳೆ ಹಾಲನದಿಯಿಂದೇಳು ಶ್ರೀದೇವಿ ಬಂದಾಳೆ ಕಾಲನದಿಯಿಂದೇಳು ಭೂದೇವಿ ಬಂದಾಳೆ ಸಾಲಮಂಚಗಳಿಂದಲಿ || ನಾಭಿಕಮಲದಿ ಜನಿಸಿದ ಬ್ರಹ್ಮ ಬಂದಾನೆ ಗಂಭೀರಗಾಯನದ ನಾರದ ಬಂದಾನೆ ರಂಭೆ ಮೇನಕೆ ಮೊದಲು ನರ್ತನದಿ ಐದಾರೆ ಶಂಬರಾರಿಪಿತನೆ ಏಳೊ || ರಾಜಸೂಯವ ಕೇಳೆ ವಾಯುಸುತ ಬಂದಾನೆ ಅರ್ಜುನನು ರಥ ಹೂಡಬೇಕೆಂದು ನಿಂದಾನೆ ಸಾಜ ಧರ್ಮಜ ಅಗ್ರಪೂಜೆಯ ಮಾಡುವೆನೆಂದು ಮೂಜಿಯನೆ ಪಿಡಿದುಕೊಂಡು || ಉರಿಹಸ್ತನಟ್ಟಿದರೆ ಹರ ಓಡಿ ಬಂದಾನೆ ಗಿರಿಜೆ ವರವನು ಬೇಡೆ ಬಂದು ಇದ್ದಾಳೆ ಪಾರಿಜಾತವ ಕೊಂಡು ಸುರರಾಜ ಬಂದಾನೆ ಗರುಡವಾಹನಕಾಗಿ || ಸತ್ಯನಾಥ ನೀನೇಳು ಸತ್ಯಭಾಮೆ ಬಂದಾಳೆ ಮತಿವಂತ ನೀನೇಳು ಜಾಂಬವತಿ ಬಂದಾಳೆ ಗತಿವಂತ ನೀನೇಳು ಶ್ರೀತುಲಸಿ ಬಂದಾಳೆ ಕಾಂತಸೇವೆಯ ಮಾಡಲು || ದೇವ ನಿನ್ನಂಘ್ರಿಪೂಜೆಯ ಮಾಡಬೇಕೆಂದು ಕಾವೇರಿ ಕೃಷ್ಣೆ ಗೌತಮಿ ಗಂಗೆ ಮಲಾಪಹಾರಿ ಸಾವಧಾನದಿ ಯಮುನೆ ತುಂಗೆ ಸರಸ್ವತಿ ಭೀಮರಥಿಯು ನೇತ್ರಾವತಿಯು || ದುರಿತ ಕಲಿ ಕರ್ಮವನು ತ್ವರಿತದಲಿ ಕೆಡಿಸುವನು ದುರಿತಾರಿ ಮೇಲುಗಿರಿ ಶಿಖರದಲಿ ನಿಂತಿಹನು ಪುರಂದರವಿಠಲರಾಯ ನೀ ಬೆಲಗಯಿತೇಳಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು