ಕರುಣಿಸೋ ರಂಗಾ
ರಚನೆ - ಪುರಂದರದಾಸರು
ಕರುಣಿಸೋ ರಂಗಾ ಕರುಣಿಸೋ
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪಲ್ಲವಿ||
ರುಕುಮಾಂಗದನಂತೆ ವ್ರತವ ನಾನರಿಯೆನೊ
ಶುಕ ಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿ*ಯಂತೆ ಧ್ಯಾನವ ಮಾಡಲರಿಯೆ
ದೇವಕಿಯಂತೆ ಮುದ್ದಿಸಲರಿಯೆನೊ ||೧||
ಗರುಡನಂದದಿ ಪೊತ್ತು ತಿರುಗಲು ಅರಿಯೆ
ಕರೆಯಲು ಅರಿಯೆ ಕರಿರಾಜನಂತೆ
ವರ ಕಪಿಯಂತೆ ದಾಸ್ಯವ ಮಾಡಲರಿಯೆ
ಸಿರಿಯಂತೆ ನೆರೆದು ಮೋಹಿಸಲರಿಯೆನೊ ||೨||
ಬಲಿಯಂತೆ ದಾನವ ಕೊಡಲು ಅರಿಯೆನೊ
ಭಕ್ತಿ ಛಲವನರಿಯೆ ಪ್ರಹ್ಲಾದನಂತೆ
ಒಲಿಸಲು ಅರಿಯೆ ಅರ್ಜುನನಂತೆ ಸಖನಾಗಿ
ಸಲಹೋ ದೇವರ ದೇವ ಪುರಂದರವಿಠಲ ||೩|
___________________________
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments