ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ
ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ
ಸುಮ್ಮನೆ ಇಬ್ಬರೂ ಕೂಡಿ ಸಾಟಿ ಮಾಡಿ ನೋಡುವ ||ಪ||
ಸರಕು ಬೆಲ್ಲ ತುಪ್ಪ ಧಾನ್ಯ, ಸವೆದೀತೆಂಬ ಚಿಂತೆಯುಂಟು
ಹರಿನಮಾಮೃತಸಾರಕ್ಕೆ ಆರ ಅಂಜಿಕೆ ಇಲ್ಲವಯ್ಯ ||
ವ್ಯಾಪಾರ ಉದ್ಯೋಗಕಿನ್ನು ಅಪಾರ ಅಂಜಿಕೆಯುಂಟು
ಗೋಪಾಳ ಬೇಡುವುದಕ್ಕೆ ಯಾರ ಅಂಜಿಕೆ ಇಲ್ಲವಯ್ಯ||
ಕಡಗ ಕಂಠಮಾಲೆಗಿನ್ನು ತುಡುಗರ ಅಂಜಿಕೆಯುಂಟು
ಅಡವೀ ತುಳಸಿಮಾಲೆಗಿನ್ನು ಯಾರ ಅಂಜಿಕೆ ಇಲ್ಲವಯ್ಯ||
ಹೆಣ್ಣು ಹೊನ್ನು ಮಣ್ಣುಗಳಿಗೆ ಕಣ್ಣಿಡುವರಂಜಿಕೆಯುಂಟು
ಪನ್ನಗಶಯನನ ನಾಮಕಾರ ಅಂಜಿಕೆ ಇಲ್ಲವಯ್ಯ ||
ನಿಮ್ಮ ಭಾಗ್ಯ ಲಕ್ಷ್ಮೀ-ದೇವಿ ನಮ್ಮ ಭಾಗ್ಯ ನಾರಾಯಣ
ನಮ್ಮ ಪುರಂದರವಿಠಲನ ಅನುದಿನ ಸ್ಮರಿಸುವುದಯ್ಯ ||
( ಟಿಪ್ಪಣಿ :- ವಿಜಯನಗರದ ಅರಸ ಶ್ರೀಕೃಷ್ಣದೇವರಾಯನು ಪುರಂದರದಾಸರನ್ನು ಭೇಟಿಯಾದಾಗ ಪುರಂದರದಾಸರು ಇದನ್ನು ರಚಿಸಿದರಂತೆ )
ಇದರ ಇನ್ನೊಂದು ಪಾಠಾಂತರ ಹೀಗಿದೆ ( http://purandara.wordpress.com/2008/05/13/%E0%B2%A8%E0%B2%BF%E0%B2%AE%E0%B3%8D%E0%B2%AE-%E0%B2%AD%E0%B2%BE%E0%B2%97%E0%B3%8D%E0%B2%AF-%E0%B2%A6%E0%B3%8A%E0%B2%A1%E0%B3%8D%E0%B2%A1%E0%B2%A6%E0%B3%8B/) ದಿಂದ :-
ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ
ಸಮ್ಮತಿಯಲಿ ನಾವು ನೀವು ಸಾಟಿ ಮಾಡಿ ನೋಡುವ ಬನ್ನಿ ||ಪ||
ಸರಕು ಬೆಲ್ಲ ತುಪ್ಪ ಧಾನ್ಯ, ಸವೆಯಿತೆಂಬ ಚಿಂತೆಯುಂಟು
ಹರಿಯ ನಾಮಾಮೃತಕೆ ಇನ್ನು ಯಾವ ಚಿಂತೆ ಇಲ್ಲವಯ್ಯ ||
ಹೇಮ ಹೊನ್ನು ಹಣಗಳಿಗೆ ಹೇರಳದ ಭಯಗಳುಂಟು
ರಾಮನಾಮ-ದ್ರವ್ಯಕಿನ್ನು ಯಾವ ಭಯವು ಇಲ್ಲವಯ್ಯ ||
ನಿಮ್ಮ ಭಾಗ್ಯ ಲಕ್ಷ್ಮೀ-ದೇವಿ ನಮ್ಮ ಭಾಗ್ಯ ನಾರಾಯಣ
ನಮ್ಮ ನಿಮ್ಮ ಭಾಗ್ಯದೊಡೆಯ ನಮ್ಮ ಪುರಂದರವಿಠ್ಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments