ಈ ಗ್ರಾಮದಲಿ ವಾಸ
(ರಾಗ ಮುಖಾರಿ ಅಟತಾಳ)
ಈ ಗ್ರಾಮದಲಿ ವಾಸ ಇರುವುದೆ ಪ್ರಯಾಸ ||ಪ||
ಹೊನ್ನು ಹಣಗಳು ಇಲ್ಲ ಇರುವುದಕೆ ಸ್ಥಳವಿಲ್ಲ
ತನ್ನವರು ತನಗೆ ಎಂಬವರು ಇಲ್ಲ
ಬೆನ್ನು ತೊಕ್ಕಂಬದಕೆ ಮತ್ತೆ ಸೋದರರಿಲ್ಲ
ಇನ್ನಿಲ್ಲಿ ಇಹವಿಲ್ಲ ಪರವಿಲ್ಲವಲ್ಲ ||
ದುಡುಕಿ ಕೆಡಕನಿಗೂರು ಒಡವೆವುಳ್ಳವಗೂರು
ಒಡಲಾಸೆಗೆ ತಿರುಗಿ ತಿಂಬುವಗೆ ಊರು
ಬಿಡದೆ ಪರವಸ್ತುಗಳ ಅಪಹರಿಸುವಗೂರು
ಕಡುಪಾಪಿ ಕಪಟಿಯಾದವರಿಗೂರು ||
ಎನ್ನ ಮನದುಬ್ಬಸವ ಆರಿಗುಸಿರೆಲೊ ದೇವ
ಚೆನ್ನಕೇಶವ ನಿನ್ನ ಚರಣವನ್ನು
ಇನ್ನು ನಂಬಿದೆನಯ್ಯ ಪುರಂದರವಿಠಲ
ಬಿನ್ನಪವ ನೀ ಕೇಳಿ ಎನ್ನಸಲಹಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments