ಇಬ್ಬರು ಹೆಂಡಿರ ಸುಖವು ಇಂದು ಕಂಡೆನಯ್ಯ
(ರಾಗ ಕಾಂಭೋಜ ಅಟತಾಳ)
ಇಬ್ಬರ್ಹೆಂಡಿರ ಸುಖವು ಇಂದು ಕಂಡೆನಯ್ಯ ||ಪ||
ಅಬ್ಬಬ್ಬ ಎಂದಿಗೂ ಸಾಕು ಸಾಕಯ್ಯ ||ಅ||
ಒಬ್ಬಳಲಿ ಪೋಗಿ ಪೋಗರವ ಮಾಡೆನ್ನಲು
ಬೊಬ್ಬೆ ಏನಿದು ಕೊಬ್ಬೆ? ನಡೆ ಎಂದಳು
ತಬ್ಬಿಬ್ಬುಗೊಂಡು ಇನ್ನೊಬ್ಬಳನು ಮಾಡೆನಲು
ಅಬ್ಬಾ ಬಿಸಿ ಮುಟ್ಟಲಾಪೆನೆ ಎಂದಳು ||
ಹಿರಿಯವಳ ಕೂಡೆ ನಾ ಸರಸವಾಡುವೆನೆಂದು
ಇರುಳು ಉಪ್ಪರಿಗೆ ನೇನೇರುತಿರಲು
ಚರಣವೊಬ್ಬಳು ಪಿಡಿದು ಶಿರವನೊಬ್ಬಳು ಪಿಡಿದು
ಸರಸರನೆ ಕೆಳಗೆ ಮೇಲೆಳೆಯುತಿಹರಯ್ಯ ||
ಅವಳ ಮಗ್ಗುಲೊಳಿರಲು ಇವಳ ಮಗ್ಗುಲ ಕಾಟ
ಇವಳ ಮಗ್ಗುಲೊಳಿರಲು ಅವಳ ಕಾಟ
ಅವಳಿಂದ ಸುಖವಿಲ್ಲ ಇವಳಿಂದ ಫಲವಿಲ್ಲ
ಇವರಿಬ್ಬರ ಸಂಗ ಅಭಿಮಾನ ಭಂಗ ||
ಎರೆದುಕೊಂಬುವೆನೆಂದು ಎಣ್ಣೆ ಬಿಸಿಮಾಡಿ ನಾ
ಕಿರಿಯವಳ ಕೂಡಿ ಒರಸಿಕೊಳುತಿರಲು
ಹಿರಿಯವಳು ಮುನಿದು ಬಂದಾಗ ನೀರಿನ ಗಡಿಗೆ ಒಡೆದು
ನಿರ್ವಾಣದಲಿ ಕುಳ್ಳಿರಿಸಿದಳು ||
ಅಂಗವರ್ಧಭಾಗ ಅನುದಿನದಿ
ಹಿಂಗದೆ ತಾವು ಕೂಡಿ ಒತ್ತುತಿರಲು
ಮಂಗಳಾಂಗ ಶ್ರೀ ಪುರಂದರವಿಠಲನೆ
ಅಂಗವನೆ ಮುರಿದು ಮೂಲೆ ಕುಳಿಸಿದರೆನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments