ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ
(ರಾಗ ಹಿಂದುಸ್ಥಾನಿ ಕಾಪಿ ಆದಿತಾಳ )
ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ ||ಪ||
ಮಂಗಳಂ ಮಂಗಳಂ ಕವಿಜನಗೇಯಗೆ ||ಅ||
ಪದುಮಮಿತ್ರಪುತ್ರಗೆ ರಾಜ್ಯವ ಸಾಧಿಸಿಕೊಟ್ಟವಗೆ
ಮುದದಿಂದ ವಾರಿಧಿಯ ಲಂಘಿಸಿ ಲಂಕೆಯ ಸುಟ್ಟವಗೆ
ಪದುಮಾಕ್ಷಿ ಜಾನಕಿಯ ನೋಡುತ ಮೋದವ ಪಟ್ಟವಗೆ
ಹದುಳದಿ ರಘುನಾಥನ ಪದದಲಿ ಶಿರವಿಟ್ಟವಗೆ ||
ಪುಂಡರೀಕನಯನ ಸುಪ್ರಚಂಡ ಭೀಮಗೆ
ಪುಂಡರ ಶಿರಗಳ ರಣದಿ ಚೆಂಡನಾಡ್ದವಗೆ
ಚಂಡಿಸಿ ಶಿವನ ವರಗಳನೆಲ್ಲ ಖಂಡಿಸಿದಾತಗೆ
ಶುಂಡಾಲಪುರದರಸನೆಂದು ಮಂಡಿಸಿ ಮೆರೆದಗೆ ||
ದುರುಳ ಮಾಯಾವಾದಿಗಳನ್ನು ಮರುಳ ಮಾಡ್ದವಗೆ
ಮುರಳೀಧರನೆ ಪರನೆಂದಾಗ ಧರೆಗೆ ತೋರಿದಗೆ
ಶರಣಾಗತರನು ಪೊರೆವನೆಂದು ಬಿರುದು ಪೊತ್ತವಗೆ
ಧರೆಯೊಳು ಪುರಂದರವಿಠಲನ ನೆನೆಯುವ ಕರುಣಾಸಾಗರಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments